Friday, November 22, 2024

Upadhyaksha Review: ಉಪಾಧ್ಯಕ್ಷ ನಾಯಕನಾಗಿ ಅಭಿಮಾನಿಗಳ ಮನ ಗೆದ್ರಾ ಚಿಕ್ಕಣ್ಣ?

ಬೆಂಗಳೂರು: ನೂರಾರು ಸಿನಿಮಾ ಮಾಡಿರೋ ಕಾಮಿಡಿ ಸ್ಟಾರ್ ಚಿಕ್ಕಣ್ಣ, ಉಪಾಧ್ಯಕ್ಷನಾಗಿ ಬಿಗ್​ಸ್ಕ್ರೀನ್​ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹೀರೋ ಆಗಿ ಬಂದ ಚಿಕ್ಕಣ್ಣನನ್ನ ಎಲ್ಲಾ ಹೀರೋಗಳ ಫ್ಯಾನ್ಸ್ ತಲೆಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಇಷ್ಟಕ್ಕೂ ಬಡ್ತಿ ಪಡೆದಿರೋ ಚಿಕ್ಕು ಹೊಸ ವರಸೆ ಹೇಗಿದೆ..? ಪ್ರೇಕ್ಷಕ ಪ್ರಭುಗಳು ಏನಂದ್ರು..? ಡಿಬಾಸ್​ರ ಗಜಪಡೆ ಹೇಳಿದ್ದೇನು..? ಎಂಬುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಚಿತ್ರ: ಉಪಾಧ್ಯಕ್ಷ

ನಿರ್ದೇಶನ: ಅನಿಲ್ ಕುಮಾರ್

ನಿರ್ಮಾಣ: ಉಮಾಪತಿ ಶ್ರೀನಿವಾಸ್

ಸಂಗೀತ: ಅರ್ಜುನ್ ಜನ್ಯ

ಸಿನಿಮಾಟೋಗ್ರಫಿ: ಶೇಖರ್ ಚಂದ್ರ

ತಾರಾಗಣ: ಚಿಕ್ಕಣ್ಣ, ಮಲೈಕಾ, ರವಿಶಂಕರ್, ಸಾಧು ಕೋಕಿಲಾ, ಧರ್ಮಣ್ಣ, ಕರಿಸುಬ್ಬು, ಶರಣ್, ಶಿವರಾಜ್ ಕೆ.ಆರ್. ಪೇಟೆ ಮುಂತಾದವರು.

ಉಪಾಧ್ಯಕ್ಷ ಸ್ಟೋರಿಲೈನ್

ಗೆಜ್ಜೆಪುರದ ಶಿವ ರುದ್ರೇಗೌಡ ಹಾಗೂ ಚಿ.ತು. ಸಂಘದ ಉಪಾಧ್ಯಕ್ಷ ನಾರಾಯಣ ನಡುವೆ ನಡೆಯೋ ಜಿದ್ದಾಜಿದ್ದಿನ ಅಂಶಗಳೇ ಉಪಾಧ್ಯಕ್ಷ ಚಿತ್ರದ ಕಥಾಹಂದರ. ಇಡೀ ಊರನ್ನ ತನ್ನ ಅಧಿಕಾರ ಹಾಗೂ ಹಣದಿಂದ ಕಾಲಡಿ ಮಾಡಿಕೊಳ್ಳೋ ಗೌಡರ ವಿರುದ್ದ ಚಿಂತೆ ಇಲ್ಲದ ತುಂಡ್ ಹೈಕ್ಳ ಸಂಘದ ಉಪಾಧ್ಯಕ್ಷ ಹಾಗೂ ಸದಸ್ಯರು ಸಮರ ಸಾರುತ್ತಾರೆ. ಅಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಪರಸ್ಪರ ಕೆಸರೆರಚಾಟದಲ್ಲಿ ಕೊನೆಗೆ ಲಾಕ್ ಆಗೋದು ಮಾತ್ರ ಉಪಾಧ್ಯಕ್ಷ.

ಹೌದು.. ತಂದೆ ಮಾಡಿದ ಸಾಲ ತೀರಿಸೋಕೆ ಅಂತ ಗೌಡರ ಮನೆಯಲ್ಲಿ ಆರು ತಿಂಗಳ ಕೆಲಸ ಬರೋ ಉಪಾಧ್ಯಕ್ಷ, ಗೌಡ್ರ ಮಗಳ ಪ್ರೀತಿಯ ಬಲೆಗೆ ಸಿಲುಕಿಕೊಳ್ತಾನೆ. ಪಂಜರದಲ್ಲಿದ್ದ ಗಿಣಿಯನ್ನ ಸ್ವತಂತ್ರವಾಗಿ ಹೊರಗೆ ಹಾರಾಡಾಲು ಬಿಡೋದ್ರ ಜೊತೆಗೆ ತಾನೂ ಎಸ್ಕೇಪ್ ಆಗ್ತಾನೆ ಉಪಾಧ್ಯಕ್ಷ. ನಂತ್ರ ಪೊಲೀಸ್ ವ್ಯವಸ್ಥೆ ಹಾಗೂ ಗೌಡರು ಅವ್ರನ್ನ ಹಿಡೀತಾರಾ..? ಹಿಡಿದ ಮೇಲೆ ಏನೆಲ್ಲಾ ಆಗುತ್ತೆ ಅನ್ನೋ ಡ್ರಾಮಾನೇ ಚಿತ್ರದ ಸ್ಟೋರಿಲೈನ್.

ಎಲ್ಲಾ ಸ್ಟಾರ್​ಗಳ ಜೊತೆ ಕೆಲಸ ಮಾಡಿರೋ ಚಿಕ್ಕಣ್ಣ, ಈ ಚಿತ್ರದಲ್ಲಿ ಉಪಾಧ್ಯಕ್ಷನಾಗಿ ಬಡ್ತಿ ಪಡೆಯೋದ್ರ ಜೊತೆ ನಾಯಕ ಅನ್ನೋ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಅದ್ರಲ್ಲೂ ಹಾಸ್ಯದ ಪರದಿಯಲ್ಲೇ ಹೀರೋಯಿಸಂ ತೋರಿಸಿರೋ ಚಿಕ್ಕು, ತನ್ನ ಮನೋಜ್ಞ ಅಭಿನಯದ ಜೊತೆ ಅತ್ಯದ್ಭುತ ಡ್ಯಾನ್ಸ್​ನಿಂದ ನೋಡುಗರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿದ್ದಾರೆ. ನ್ಯಾಚುರಲ್ ಸ್ಟಾರ್ ಅನ್ನೋ ಬಿರುದು ಪಡೆದಿರೋ ಚಿಕ್ಕಣ್ಣ, ಕಾಮಿಡಿ, ಎಮೋಷನ್ಸ್ ಹಾಗೂ ಸೂಪರ್ ಸ್ಟಾರ್​​ಗಳ ಸ್ಫೂಫ್ ಮಾಡುವಾಗ ಆ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿರೋದು ಇಂಟರೆಸ್ಟಿಂಗ್.

ಚೊಚ್ಚಲ ಚಿತ್ರದಲ್ಲೇ ಚೆಂದುಳ್ಳಿ ಚೆಲುವೆ ಮಲೈಕಾ ಒಳ್ಳೆಯ ಸ್ಕೋರ್ ಮಾಡಿದ್ದಾರೆ. ಆಕೆಯ ಬೆಡಗು ಬಿನ್ನಾಣಗಳ ಜೊತೆಗೆ ನುರಿತ ಕಲಾವಿದೆ ರೀತಿ ಅಂಜಲಿ ಆಗಿ ನಟಿಸಿರೋ ಪರಿ ನಿಜಕ್ಕೂ ಭೇಷ್ ಅನ್ನುವಂತಿದೆ. ಡ್ಯಾನ್ಸ್, ಡೈಲಾಗ್ ಡೆಲಿವರಿ, ಗ್ಲಾಮರ್ ಹೀಗೆ ಎಲ್ಲಾ ಌಂಗಲ್​​ನಿಂದ ಮಲೈಕಾ ಮ್ಯಾಜಿಕ್ ಮಾಡಿದ್ದಾರೆ.

ರವಿಶಂಕರ್ ಅವ್ರು ಶಿವರುದ್ರೇಗೌಡನಾಗಿ ಗೌಡರ ಗತ್ತು, ಗಮ್ಮತ್ತು ತೋರಿದ್ದಾರೆ. ಸಾಧು ಕೋಕಿಲಾ ಕಾಮಿಡಿ ನಗು ತರಿಸದೇ ಹೋದರೂ ಸಹ, ಉಪಾಧ್ಯಕ್ಷ ಸಂಘದ ಸದಸ್ಯನಾಗಿ ಧರ್ಮಣ್ಣ ಹಾಗೂ ಲಾಡ್ಜ್ ಮಾಲೀಕನಾಗಿ  ಶಿವರಾಜ್ ಕೆಆರ್ ಪೇಟೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹೀರೋ ತಂದೆ ಪಾತ್ರದಲ್ಲಿ ಕರಿಸುಬ್ಬು ನೆನಪಲ್ಲಿ ಉಳಿಯೋ ಅಂತಹ ಅಭಿನಯ ನೀಡಿದ್ದು, ಶರಣ್ ಗೆಸ್ಟ್ ಅಪಿಯರೆನ್ಸ್ ಚಿತ್ರದ ಹೈಲೈಟ್.

ಉಪಾಧ್ಯಕ್ಷ ಪ್ಲಸ್ ಪಾಯಿಂಟ್ಸ್

  • ಚಿಕ್ಕಣ್ಣ, ಮಲೈಕಾ, ರವಿಶಂಕರ್ ನಟನೆ
  • ಅನಿಲ್ ಕುಮಾರ್ ನಿರ್ದೇಶನ, ನಿರೂಪಣೆ
  • ಚಿಕ್ಕಣ್ಣ ಡ್ಯಾನ್ಸ್
  • ಅರ್ಜುನ್ ಜನ್ಯ ಸಂಗೀತ
  • ಪ್ರತ್ಯಕ್ಷ & ಪರೋಕ್ಷವಾಗಿ ಬಳಕೆ ಆಗಿರೋ ಸ್ಟಾರ್​​ಡಮ್

ಉಪಾಧ್ಯಕ್ಷ ಮೈನಸ್ ಪಾಯಿಂಟ್ಸ್

ಹೊಡಿ, ಬಡಿ, ಕಡಿ ಸಿನಿಮಾಗಳ ನಡುವೆ ಇದು ಒಂದೊಳ್ಳೆ ಮನರಂಜನಾತ್ಮಕ ಸಿನಿಮಾ ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೆ ಕೆಲ ಸನ್ನಿವೇಶಗಳಲ್ಲಿ ಹಾಸ್ಯ ತುಂಬಾ ನಾಟಕೀಯ ಅನಿಸುತ್ತೆ. ಕಥೆಯಲ್ಲಿ ಹೊಸತನವಿಲ್ಲ. ಸಾಧು ಕೋಕಿಲ ಅವ್ರನ್ನ ಬಳಸದೇ ಇದ್ದಿದ್ರೆ ನಿರ್ಮಾಪಕರಿಗೆ ಹಣ ಆದ್ರೂ ಉಳಿತಾಯ ಆಗ್ತಿತ್ತು.

ಉಪಾಧ್ಯಕ್ಷ ಫೈನಲ್ ಸ್ಟೇಟ್​​ಮೆಂಟ್

ಕಥೆಯಲ್ಲಿ ಧಮ್ ಇಲ್ಲವಾದರೂ, ಚಿಕ್ಕಣ್ಣ ನಟನೆಯಲ್ಲಿ ರಿಧಮ್ ಇದೆ. ಅನಿಲ್ ತಮ್ಮ ಸಿನಿಮಾ ಅನುಭವಗಳನ್ನೆಲ್ಲಾ ಬಳಸಿ ಈ ಸಿನಿಮಾ ಮಾಡೋ ಪ್ರಯತ್ನ ಮಾಡಿದ್ದಾರೆ. ಅಣ್ಣಾವ್ರ ಹಿರಣ್ಯ ಕಶ್ಯಪು, ಬಾಹುಬಲಿಯ ಪ್ರಭಾಸ್, ಪುಷ್ಪ ಚಿತ್ರದ ಅಲ್ಲು ಅರ್ಜುನ್ ಹಾಗೂ ಕೆಜಿಎಫ್ ರಾಕಿಭಾಯ್ ರೀತಿಯ ಸ್ಪೂಫ್ ದೃಶ್ಯಗಳು ನಿಜಕ್ಕೂ ವ್ಹಾವ್ ಫೀಲ್ ತರಿಸುತ್ತೆ. ಅಲ್ಲದೆ, ಚೆಲುವಿನ ಚಿತ್ತಾರದ ಕ್ಲೈಮ್ಯಾಕ್ಸ್​​ನಲ್ಲಿ ಗಣಿ-ಅಮ್ಮುರನ್ನ ಹೋಲುವ ದೃಶ್ಯವೊಂದು ಅಮೇಜಿಂಗ್. ಸಂಭಾಷಣೆ ಕೂಡ ಹಿತವಾಗಿದ್ದು, ಮಕ್ಕಳಿಂದ ಮುದುಕರವೆಗೆ ಎಲ್ಲರೂ ನೋಡಬಹುದಾದ ಸಿನಿಮಾ ಆಗಿದೆ. ಓಪನಿಂಗ್​ನಿಂದ ಎಂಡ್​ವರೆಗೆ ತುಂಡ್ ಹೈಕ್ಳು ಮಸ್ತ್ ಮಜಾ ಕೊಡ್ತಾರೆ. ಸೋ ವಯಲೆನ್ಸ್ ಬೇಸ್ಡ್ ಸಿನಿಮಾಗಳನ್ನ ನೋಡಿ ಬೇಸರ ಆಗಿರೋರಿಗೆ ಇದು ಭರಪೂರ ಮನರಂಜನೆ ನೀಡಲಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

 

RELATED ARTICLES

Related Articles

TRENDING ARTICLES