ಭಾರತ್ ಜೋಡೋ ಯಾತ್ರೆ ಮೂಲಕ ಗಮನ ಸೆಳೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಮತ್ತೊಂದು ಸುತ್ತಿನ ಯಾತ್ರೆಗೆ ಸಿದ್ಧರಾಗಿದ್ದಾರೆ. ಇಂದಿನಿಂದ ಭಾರತ್ ನ್ಯಾಯ ಯಾತ್ರೆ ಎಂಬ ಹೆಸರಿನಲ್ಲಿ ಮಣಿಪುರದಿಂದ ಮಹಾರಾಷ್ಟ್ರದ ಕಡೆಗೆ ರಾಗಾ ಯಾತ್ರೆ ಮಾಡಲಿದ್ದಾರೆ.
ಮಣಿಪುರದಿಂದ ಮುಂಬೈಗೆ 67 ದಿನಗಳ ಅವಧಿಯಲ್ಲಿ ಪಾದಯಾತ್ರೆ ಮಾಡಲಿದ್ದಾರೆ. ಇಂದಿನಿಂದ ಮಾರ್ಚ್ 20 ರವರೆಗೆ ಇಂಫಾಲ್‍ನಿಂದ ಮುಂಬೈಗೆ ಯಾತ್ರೆ ಪ್ರಯಾಣಿಸಲಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯು 66 ದಿನಗಳಲ್ಲಿ ಬಸ್ಸುಗಳು ಮತ್ತು ಕಾಲ್ನಡಿಗೆಯಲ್ಲಿ 6,713 ಕಿ.ಮೀಗಳನ್ನು ಕ್ರಮಿಸುವ ಗುರಿ ಹೊಂದಿದೆ. ಈ ಪಯಣದುದ್ದಕ್ಕೂ 14 ರಾಜ್ಯಗಳು, 110 ಜಿಲ್ಲೆಗಳು, 100 ಲೋಕಸಭಾ ಸ್ಥಾನಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳನ್ನು ದಾಟಿ, ಮಾರ್ಚ್ 20 ರಂದು ಮುಂಬೈನಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: ಮಕರ ಸಂಕ್ರಾತಿ ಹಬ್ಬದ ವಿಶೇಷತೆ ಹಾಗು ಶುಭಗಳಿಗೆ ಕುರಿತು ಕಾಲಜ್ಞಾನ ಮಠದ ಶ್ರೀಗಳ ವಿಶ್ಲೇಷಣೆ!
ಇನ್ನೂ ನ್ಯಾಯ್ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಕೆ ಸಾಥ್ ನೀಡಲು ಕರ್ನಾಟಕದ ಮಂತ್ರಿಗಳು ತೆರಳಲಿದ್ದಾರೆ. ಈ ಕುರಿತು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಹಾಗೂ ಸಿಎಂ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಹೋಗ್ತಿದ್ದೇವೆ. ನಮ್ಮ ದೇಶಕ್ಕೆ ಶಕ್ತಿ ಮೂಡಿಸಲು ರಾಹುಲ್ ಗಾಂಧಿ ಅವರು ದೊಡ್ಡ ಪ್ರಯತ್ನ ಮಾಡ್ತಿದ್ದಾರೆ. ಈ ಹಿಂದೆ ಯಾರೂ ಇಂತಹ ಪ್ರಯತ್ನ ಮಾಡಿರಲಿಲ್ಲ. ನ್ಯಾಯ ಕೊಡಿಸಲು ನಾವೆಲ್ಲಾ ಭಾಗಿಯಾಗ್ತಿದ್ದೇವೆ ಎಂದರು.
ಇಂದಿನಿಂದ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭವಾಗುತ್ತಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಹ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನ್ಯಾಯ ಯಾತ್ರೆಗೆ ಸಿಎಂ, ಡಿಸಿಎಂ ಜೊತೆ ನಾನು ಹೋಗ್ತಿದ್ದೀನಿ. ನಮ್ಮ ಜೊತೆ ಕೆಲ ಸಚಿವರು ಕೂಡ ಭಾಗಿಯಾಗ್ತಾರೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ರು. ಯಾತ್ರೆಗೆ ಚಾಲನೆ ನೀಡಿ ಸಂಜೆ ವೇಳೆಗೆ ಎಲ್ಲರೂ ಬೆಂಗಳೂರಿಗೆ ವಾಪಸಾಗಲಿದ್ದಾರೆ.