ಬೆಂಗಳೂರು: ಗಣರಾಜ್ಯೋತ್ಸವದ ಪ್ರಯುಕ್ತ ಹೊಸದಿಲ್ಲಿಯಲ್ಲಿ ಜನವರಿ 26ರಂದು ನಡೆಯಲಿರುವ ಪಥ ಸಂಚಲನದಲ್ಲಿ ಭಾಗವಹಿಸಲು ಕರುನಾಡಿನ ಸ್ತಬ್ಧ ಚಿತ್ರಕ್ಕೆ ಅನುಮತಿ ನಿರಾಕರಿಸುವುದಕ್ಕೆ ಸಿಎಂ ಸಿದ್ದರಾಮಯ್ಯ ಕೇಂದ್ರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ ಕಳೆದ ವರ್ಷವೂ ಸ್ತಬ್ದಚಿತ್ರಕ್ಕೆ ಅವಕಾಶ ನೀಡಿರಲಿಲ್ಲ.ವಿವಾದ ಸ್ವರೂಪ ಪಡೆದುಕೊಂಡ ಮೇಲೆ ಅನುಮತಿ ನೀಡಿತ್ತು. ಮತ್ತೆ ಕನ್ನಡಿಗರನ್ನ ಅಪಮಾನಿಸುವ ಚಾಳಿ ಮುಂದುವರೆಸಿದೆ ಎಂದರು.
ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುವ ಮೂಲಕ ಕೇಂದ್ರ ಸರ್ಕಾರವು ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ. ಕಳೆದ ವರ್ಷ ಕೂಡ ಮೊದಲಿಗೆ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಿ, ವಿವಾದದ ಸ್ವರೂಪ ಪಡೆದ ನಂತರ…
— Siddaramaiah (@siddaramaiah) January 9, 2024
ಪ್ರತಿ ವರ್ಷ ಗಣ ರಾಜ್ಯೋತ್ಸವದ ದಿನ ಹೊಸದಿಲ್ಲಿಯ ರಾಜಪಥ್‌ನಲ್ಲಿ(ಕರ್ತವ್ಯ ಪಥ) ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯುತ್ತದೆ. ಸತತ 14 ವರ್ಷಗಳಿಂದ ಗಣರಾಜೋತ್ಸವ ಪರೇಡ್‌ನಲ್ಲಿ ತನ್ನ ಸ್ತಬ್ಧ ಚಿತ್ರ ಪ್ರದರ್ಶಿಸುತ್ತಾ ಬಂದಿರುವ ಕರ್ನಾಟಕವು 15ನೇ ಬಾರಿಗೆ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಸಜ್ಜಾಗಿತ್ತು. ಆದರೆ, ರಕ್ಷಣಾ ಸಚಿವಾಲಯದ ಉಸ್ತುವಾರಿಯ ಕೇಂದ್ರ ಆಯ್ಕೆ ಸಮಿತಿಯು ಕರುನಾಡಿನ ಸ್ತಬ್ಧ ಚಿತ್ರದ ಪ್ರದರ್ಶನಕ್ಕೆ ಅನುಮತಿ ನಿರಾಕರಿಸುವ ಮೂಲಕ ಕನ್ನಡಿಗರಿಗೆ ನಿರಾಸೆ ಮೂಡಿಸಿದೆ.
ಹಿಂದಿನ ವರ್ಷವೂ ಹಗ್ಗಜಗ್ಗಾಟ
ಕಳೆದ ವರ್ಷವೂ ಆರಂಭದಲ್ಲಿ ರಾಜ್ಯದ ಸ್ತಬ್ಧ ಚಿತ್ರಕ್ಕೆ ಕೇಂದ್ರವು ಅನುಮತಿ ನಿರಾಕರಿಸಿತ್ತು. ಈ ವಿಚಾರ ವಿವಾದದ ಸ್ವರೂಪ ಪಡೆದು ಕೇಂದ್ರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ಬಳಿಕ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರದ ಮನವೊಲಿಸಿ ರಾಜ್ಯದ ಟ್ಯಾಬ್ಲೊಗೆ ಅವಕಾಶ ಕೊಡಿಸಿದ್ದರು. ಪರೇಡ್‌ಗೆ 10 ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ’ನಾರಿ ಶಕ್ತಿ’ ಪರಿಕಲ್ಪನೆಯ ಸ್ತಬ್ಧ ಚಿತ್ರ ರೂಪಿಸಲಾಗಿತ್ತು.