ಉಡುಪಿ: ಮದುವೆ ವಯಸ್ಸು ಮೀರುತ್ತಿರುವ ಈ ವೇಳೆಯಲ್ಲಿ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಕೊರಗುತ್ತಿದ್ದ ಇಬ್ಬರು ಬ್ರಾಹ್ಮಣ ಯುವಕರು, ಅನಾಥಾಶ್ರಮದ ಯುವತಿಯರನ್ನು ಮದುವೆಯಾಗಿ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದ್ದಾರೆ.
ಉಡುಪಿಯ ಸ್ಟೇಟ್ ಹೋಂನಲ್ಲಿ ಈ ಎರಡೂ ಜೊಡಿಗಳ ಮದುವೆ ಸಮಾರಂಭವು ಯಾವುದೇ ಅದ್ದೂರಿ ಮದುವೆಗಳಿಗೂ ಕಡಿಮೆ ಇಲ್ಲದಂತೆ ನೆರವೇರಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬೇಳಂಜೆ ದೇವಸ್ಥಾನದ ಅರ್ಚಕ ಸತ್ಯನಾರಾಯಣ ಶ್ರೀಧರ ಭಟ್ ಎಂಬವರ ಮದುವೆ ಕುಮಾರಿ ಜೊತೆ ನೆರವೇರಿದೆ. ಮೊಳಹಳ್ಳಿಯ ಕೃಷಿಕ ಗಣೇಶ ಶಾಸ್ತ್ರಿ ಮತ್ತು ಶೀಲಾ ಅವರ ಮದುವೆ ನಡೆದಿದ್ದು ಹೊಸ ಬಾಳಿಗೆ ಜೊತೆಯಾಗಿದ್ದಾರೆ.
ಇದನ್ನೂ ಓದಿ: ವಾತಾವರಣದಲ್ಲಿ ಏರುಪೇರು ಚಳಿ ಪ್ರಮಾಣ ಹೆಚ್ಚಳ : ಹವಾಮಾನ ಇಲಾಖೆ
ಮದುವೆಯಾಗಿಲ್ಲವೆಂದು ಕೊರಗುತ್ತಿರುವ ಯುವಜನತೆಗೆ ಈ ಇಬ್ಬರು ಜೋಡಿಗಳು ಉತ್ತಮ ಸಂದೇಶವನ್ನು ನೀಡಿದ್ದು, ಅನಾಥಾಶ್ರಮದ ಹೆಣ್ಣುಮಕ್ಕಳನ್ನು ಮದುವೆಯಾಗುವ ಮೂಲಕ ಹೆಣ್ಣು ಸಿಕ್ಕಿಲ್ಲವೆಂದು ಮಾನಸಿಕ ಖಿನ್ನತೆಗೆ ಒಳಗಾಗುವ ಬದಲು ಈ ರೀತಿಯ ಆಯ್ಕೆ ಮಾಡಿಕೊಳ್ಳುವ ಮೂಲಕ ಯುವಕರು ಸಮಾಜಕ್ಕೆ ಆದರ್ಶರಾಗಬಹುದಾಗಿದೆ.
ಉಡುಪಿಯಲ್ಲಿ ನಡೆದ ಈ ವಿಶೇಷ ಮದುವೆಗೆ ಉಡುಪಿ ಜಿಲ್ಲಾಧಿಕಾರಿಗಳಾದ ವಿದ್ಯಾಕುಮಾರಿ, ಜಿಲ್ಲಾ ನ್ಯಾಯಾಧೀಶರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಡಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.