ಶಿವಮೊಗ್ಗ : ಸಂಸದ ಬಿ.ವೈ.ರಾಘವೇಂದ್ರ ಗಡಿಬಿಡಿಯಲ್ಲಿ ಶಿಷ್ಟಚಾರವನ್ನು ಉಲಂಘಿಸಿ, ಬೈಪಾಸ್ ರಸ್ತೆಯ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಇದು ಸರ್ಕಾರಿ ಕಾರ್ಯಕ್ರಮವಾಗದೆ ಬಿಜೆಪಿ ಕಾರ್ಯಕ್ರಮವಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಂಸದ ಬಿ.ವೈ. ರಾಘವೇಂದ್ರ ಇತ್ತೀಚೆಗೆ ಕಾಮಗಾರಿಗಳು ಮುಗಿಯದೇ ಮತ್ತು ಮುಗಿದಿದೆ ಎಂದು ಅಧಿಕಾರಿಗಳ ಪ್ರಮಾಣ ಪತ್ರ ಇಲ್ಲದೆ ಗಡಿಬಿಡಿಯಲ್ಲಿ ತಾವೇ ಟೇಪ್ ಕಟ್ ಮಾಡುತ್ತಾರೆ. ಇಂತಹ ಉದ್ಘಾಟನಾ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗೊತ್ತಿರುವುದಿಲ್ಲ. ಕೆಲವು ಬಿಜೆಪಿ ಮುಖಂಡರು, ಹಿಂಬಾಲಕರನ್ನು ಕರೆದುಕೊಂಡು ಹೋಗಿ ಉದ್ಘಾಟನೆ ಮಾಡುವ ಈ ಪರಿ ಅತ್ಯಂತ ಕೆಟ್ಟ ಸಂಸ್ಕೃತಿ ಎಂದು ಟೀಕಿಸಿದ್ದಾರೆ.
ನಿನ್ನೆ ಕೂಡ ಸೇತುವೆಯನ್ನು ಸಂಸದರು ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬಿಜೆಪಿಯ ಶಾಸಕರುಗಳಾದ ರುದ್ರೇಗೌಡ, ಅರುಣ್, ಚೆನ್ನಬಸಪ್ಪನವರಾಗಲಿ ಕರೆದಿಲ್ಲ. ಅಧಿಕಾರಿಗಳನ್ನು ಕೇಳಿದರೆ, ನಮಗೆ ಗೊತ್ತೇ ಇಲ್ಲ ಎನ್ನುತ್ತಾರೆ. ಇದು ಸರ್ಕಾರದ ಕಾರ್ಯಕ್ರಮವಲ್ಲವೇ? ಅಧಿಕಾರಿಗಳು ಈ ಕಾರ್ಯಕ್ರಮವನ್ನು ರೂಪಿಸಬೇಕು. ಅದನ್ನು ಬಿಟ್ಟು ಕೇವಲ ಕೆಲವು ಬಿಜೆಪಿ ಮುಖಂಡರನ್ನು ಇಟ್ಟುಕೊಂಡು ಈ ರೀತಿ ಉದ್ಘಾಟನೆಗಳನ್ನು ಚುನಾವಣೆಯ ಹಿನ್ನೆಲೆಯಲ್ಲಿ ಮಾಡುತ್ತಾ ಹೊರಟಿರುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಮಗಾರಿ ಪೂರ್ಣ ಮುಗಿಯದೇ ಉದ್ಘಾಟನೆ
ಇಡೀ ಶಿವಮೊಗ್ಗದಲ್ಲಿ ನಡೆಯುತ್ತಿರುವ ಕಾಮಗಾರಿಗಳೆಲ್ಲವೂ ಬಿಜೆಪಿ ನಾಯಕರ, ಮನೆಗಳ ಇಲ್ಲವೇ ಆಸ್ತಿಗಳ ಸುತ್ತ ತಿರುಗಿ ಅತ್ಯಂತ ಶೀಘ್ರವಾಗಿ ನಡೆಯುತ್ತವೆ. ರಿಂಗ್ ರೋಡ್ ಆಗಲಿ, ರಸ್ತೆಗಳಾಗಲಿ, ಬಿಜೆಪಿ ನಾಯಕರಿಗೆ ಅನುಕೂಲವಾಗುವಂತೆ ರೂಪುಗೊಳ್ಳುತ್ತವೆ. ಈ ಕಾಮಗಾರಿಗಳು ಪೂರ್ಣ ಮುಗಿಯದೇ ಇದ್ದರೂ ಕೂಡ ಏಕೆ ಅವಸರದಿಂದ ಉದ್ಘಾಟನೆ ಮಾಡುತ್ತಾರೋ ಗೊತ್ತಿಲ್ಲ ಎಂದು ಕುಟುಕಿದ್ದಾರೆ.