ಬೆಂಗಳೂರು : ಕೇರಳದಲ್ಲಿ ಮಾರಕ ಕೊರೊನಾ ವೈರಸ್‌ಗೆ ವೃದ್ಧ ಬಲಿಯಾಗಿದ್ದು, ಕಳೆದ 48 ಗಂಟೆಗಳಲ್ಲಿ ಎರಡನೇ ಸಾವು ದಾಖಲಾಗಿದೆ.
ಮಹಾಮಾರಿ ಕೊರೊನಾ ಮತ್ತೆ ದೇಶಕ್ಕೆ ವಕ್ಕರಿಸಿದೆ. ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ ಎಂಬಂತೆ ಕೇರಳದಲ್ಲಿ ಹೊಸ ಕೊರೊನಾ ರೂಪಾಂತರ ಪತ್ತೆಯಾಗಿದೆ. ಚೀನಾದಲ್ಲಿ ಹರಡುತ್ತಿರುವ JN.1 ಸಬ್ ವೆರಿಯಂಟ್ ಕೇರಳದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ. ಇದನ್ನು ಪಿರೋಲಾ ಅಥವಾ BA.2.86 ಎಂದು ಕರೆಯಲಾಗುತ್ತದೆ.
79 ವರ್ಷದ ಮಹಿಳೆಗೆ ಈ ಸೋಂಕು ತಗುಲಿದೆ. RT-PCR ಪರೀಕ್ಷೆಯಲ್ಲಿ ಕಳೆದ ಶುಕ್ರವಾರ ಪ್ರಕರಣ ಪತ್ತೆಯಾಗಿದ್ದು, ಇಂದು ಬೆಳಕಿಗೆ ಬಂದಿದೆ. ಈ ರೂಪಾಂತರ ವೇಗವಾಗಿ ಹರಡುತ್ತದೆ. ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಕೋವಿಡ್ ಪ್ರಕರಣ ಹೆಚ್ಚಳ
ಕೇವಲ ಒಂದು ತಿಂಗಳಲ್ಲಿ ಕೇರಳದಲ್ಲಿ ಕೋವಿಡ್ ಪ್ರಕರಣಗಳು 33 ರಿಂದ 768 ಕ್ಕೆ ಏರಿಕೆಯಾಗಿದ್ದು ಜನರಲ್ಲಿ ಆತಂಕವನ್ನು ಉಂಟುಮಾಡಿದೆ. ಈ ಜೆ1 ರೂಪಾಂತರದ ಲಕ್ಷಣಗಳು ಜ್ವರ, ಕೆಮ್ಮು, ಸುಸ್ತು, ಮೂಗು ಕಟ್ಟುವಿಕೆ, ಸ್ರವಿಸುವ ಮೂಗು, ಅತಿಸಾರ ಮತ್ತು ತಲೆನೋವು ಎಂದು ತಜ್ಞರು ಹೇಳಿದ್ದಾರೆ.