ಹಾವೇರಿ : ರಾಹುಲ್ ಗಾಂಧಿ ಹಾಗೂ ಸೊನಿಯಾ ಗಾಂಧಿ ಒತ್ತಡದಿಂದ ಡಿ.ಕೆ. ಶಿವಕುಮಾರ್ ಅವರ ಕೇಸ್ ವಾಪಸ್ ಪಡೆಯಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಯಾವತ್ತೂ ಸ್ವಾಭಿಮಾನ ಬಿಟ್ಟುಕೊಟ್ಟಿಲ್ಲ. ಇಂದು ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಡಿಕೆಶಿ ಪ್ರಕರಣ ವಾಪಸ್ ಪಡೆಯಲು ಮುಂದಾಗಿದ್ದಾರೆ. ಇದು ನಾಚಿಕೆಗೇಡು, ಖಂಡನೀಯ ಎಂದು ಕುಟುಕಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರಮುಖರು ಸೇರಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಡಿಕೆಶಿ ಮೇಲೆ ಆರೋಪ ಬಂದಿದೆ. ಮೊದಲು ರಾಜೀನಾಮೆ ಕೊಡಬೇಕು. ಡಿಕೆಶಿ ಸಚಿವ ಸಂಪುಟದಲ್ಲಿ ಇದ್ದು ಸಿಬಿಐ ದಾಖಲೆ ತಿದ್ದಬಹುದು. ಆದ್ದರಿಂದ ರಾಜೀನಾಮೆ ಕೊಡಬೇಕು. ಮುಟ್ಟಾಳ ಕೆಲಸ ಮಾಡುವದನ್ನ ಬಿಟ್ಟು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಗುಡುಗಿದ್ದಾರೆ.
ಎಷ್ಟು ಹಣ ಹೊಡೆದಿದ್ದಾರೆ ಎಂಬ ದಾಖಲೆಗಳಿವೆ
ಇವರು ಅಧಿಕಾರಕ್ಕೆ ಬಂದ ದಿನದಿಂದ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ನಾನು ನೇರವಾಗಿ ಹೇಳುತ್ತೇನೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಉನ್ನತ ಮಟ್ಟದ ಅಧಿಕಾರಿಗಳ ವರ್ಗಾವಣೆಯಲ್ಲಿ ಎಷ್ಟು ಹಣ ಹೊಡೆದಿದ್ದಾರೆ ಎಂದು ನನ್ನಲ್ಲಿ ದಾಖಲೆಗಳಿವೆ. ಅಧಿಕಾರಿಗಳನ್ನ ಅವರ ಮುಂದೆ ನಿಲ್ಲಿಸುವೆ. ಆದ್ದರಿಂದ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.
ಮಾತೆತ್ತಿದರೆ ಸಂವಿಧಾನ ಎನ್ನುತ್ತಾರೆ
ದೇಶದ ಯಾವುದೇ ರಾಜ್ಯದಲ್ಲಿ ಸಿಬಿಐ ಪ್ರಕರಣವನ್ನು ಸಚಿವ ಸಂಪುಟದ ಮುಖಾಂತರ ಈ ರೀತಿ ವಾಪಸ್ ಪಡೆದಿಲ್ಲ. ಸುಪ್ರೀಂಕೋರ್ಟ್ ನ್ಯಾಯಾಧೀಶರು ಸಿಬಿಐಗೆ ಕೊಡುವ ಅಧಿಕಾರ ವಿನಃ ವಾಪಸ್ ಪಡೆಯುವ ಅಧಿಕಾರ ಇಲ್ಲ. ಸಿಎಂ ಸಿದ್ದರಾಮಯ್ಯ ಅವರು ಮಾತೆತ್ತಿದರೆ ಸಂವಿಧಾನ ಎನ್ನುತ್ತಾರೆ. ಆದರೆ, ಇಂದು ಸಂವಿಧಾನವನ್ನು ಗಾಳಿಗೆ ತೂರಿ ಡಿಕೆಶಿ ಮೇಲಿನ ಕೇಸ್ ವಾಪಸ್ ಪಡೆದಿದ್ದಾರೆ. ಸಿದ್ದರಾಮಯ್ಯ ಆಸಕ್ತಿ ತೋರಿ ಅನುಮತಿ ವಾಪಸ್ ಪಡೆದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.