ಹಾಸನ : ಅನಿವಾರ್ಯತೆ ಬಂದಾಗ ದತ್ತಮಾಲೆ ಹಾಕುತ್ತೇನೆ. ಹಿಂದೂ ಧರ್ಮವನ್ನು ರಕ್ಷಣೆ ಮಾಡಲು ಎಲ್ಲಾ ರೀತಿಯ ತೀರ್ಮಾನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಹಾಸನ ಜಿಲ್ಲೆಯ ಅತ್ತಿಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, ಮಾಧ್ಯಮದವರು ದತ್ತಮಾಲೆ ಹಾಕ್ತೀರಾ? ಎಂದು ಪ್ರಶ್ನಿಸಿದ್ದಕ್ಕೆ ದತ್ತಮಾಲೆ ಹಾಕಿದರೆ ತಪ್ಪೇನು? ಎಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಚುನಾವಣೆಯಲ್ಲಿ ಮತ ಪಡೆಯಲು ರಾಜ್ಯದಲ್ಲಿ ಜಾತಿ-ಜಾತಿ ನಡುವೆ ಬಿರುಕು ಉಂಟು ಮಾಡಲು ಶುರು ಮಾಡಿದ್ದಾರೆ. ವಿಧಾನಸಭೆ ಸಭಾಧ್ಯಕ್ಷರಿಗೆ ಎದ್ದು ನಿಂತು ನಾವು ಗೌರವ ಕೊಡುವುದು ಯು.ಟಿ. ಖಾದರ್ ಅವರಿಗೆ ಅಲ್ಲ. ಒಂದು ಸಮಾಜಕ್ಕಲ್ಲ. ಅವರು ಸದನದ ಗೌರವಾನ್ವಿತ ಪೀಠದ ಸಭಾಧ್ಯಕ್ಷರು. ಅದಕ್ಕೆ ಗೌರವ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಚರ್ಚೆ ಮಾಡೋಣ
ಆಶ್ರಯ ಕಮಿಟಿ ಅಧ್ಯಕ್ಷ ಸಿಎಂ ಸಿದ್ದರಾಮಯ್ಯರ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಇಡೀ ತಾಲೂಕಿನ ಅಧಿಕಾರಿಗಳನ್ನ ಜನ ಸಂಪರ್ಕ ಸಭೆ ಅಂತಾ ಕರೆದಿದ್ದಾರೆ. ಒಬ್ಬ ಆಶ್ರಯ ಕಮಿಟಿ ಅಧ್ಯಕ್ಷನಿಗೆ ಇಷ್ಟೊಂದು ಪವರ್ ಕೊಟ್ಟಿದಿರಲ್ಲ. ಇದೇ ಪವರ್ ರಾಜ್ಯದ ಎಲ್ಲಾ ಆಶ್ರಯ ಕಮಿಟಿ ಅಧ್ಯಕ್ಷರಿಗೆ ಕೊಡ್ತೀರಾ? ಇದನ್ನೆಲ್ಲಾ ವಿಧಾನಸಭೆಯಲ್ಲಿ ಚರ್ಚೆ ಮಾಡ್ತೀವಿ. ವಿಧಾನಸೌಧದಲ್ಲಿ ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಸಾಬೀತು ಮಾಡಿದ್ರೆ ರಾಜಕೀಯ ಬಿಡ್ತಿನಿ ಅಂತೀರಾ?
ವರ್ಗಾವಣೆ ಮಾಡಲು ಸಿಎಂಗೆ ಸಂಪೂರ್ಣ ಅಧಿಕಾರ ಇದೆ. ವರ್ಗಾವಣೆ ಮಾಡೋಕೆ ನನ್ನ ತಕರಾರು ಇಲ್ಲ. ಆದರೆ, ವರ್ಗಾವಣೆ ಹೆಸರಿನಲ್ಲಿ ದಂಧೆ ಮಾಡ್ತಿದ್ದೀರ ಇದನ್ನ ಸಾಬೀತು ಮಾಡಿದ್ರೆ ರಾಜಕೀಯ ಬಿಡ್ತಿನಿ ಅಂತೀರಾ? ವಿವೇಕಾನಂದ ಅವರ ಒಂದೇ ವಿಚಾರ ಸಾಕಲ್ವಾ? ವರುಣಾ ಕ್ಷೇತ್ರದ ಉಸ್ತುವಾರಿ ನಡೆಸೋ ನಿಮ್ಮ ಮಗನಿಗೆ ವಿವೇಕಾನಂದ ಯಾರು ಅಂತಾ ಗೊತ್ತಿಲ್ವಾ? ಹ್ಯೂಬ್ಲೆಟ್ ವಾಚ್ ಕಳ್ಳತನದ ವಾಚ್. ಅದನ್ನು ಎರಡು ವರ್ಷ ಹಾಕೊಂಡು ಓರ್ವ ಸಿಎಂ ಓಡಾಡಿದ. ಸುಳ್ಳು ಹೇಳಬೇಕೋ? ನಿಜ ಹೇಳಬೇಕೋ? ಇವರಿಂದ ನಾನು ಕಲಿಬೇಕಾ? ಎಂದು ಕಿಡಿಕಾರಿದರು.