ಬೆಳಗಾವಿ : ಕನ್ನಡದ ಸ್ವಾಮೀಜಿ ಎಂದೇ ಪ್ರಖ್ಯಾತಿ ಪಡೆದಿದ್ದ ಚಿಂಚಣಿ ಸಿದ್ದಸಂಸ್ಥಾನ ಮಠದ ಪೀಠಾಧಿಕಾರಿ ಶ್ರೀ ಅಲ್ಲಮಪ್ರಭು ಸ್ವಾಮೀಜಿ (63) ಲಿಂಗೈಕ್ಯರಾಗಿದ್ದಾರೆ.
ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅಲ್ಲಮಪ್ರಭು ಸ್ವಾಮೀಜಿ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಅಲ್ಲಮಪ್ರಭು ಸ್ವಾಮೀಜಿಗಳು ಗಡಿ ಭಾಗದಲ್ಲಿ ಕನ್ನಡದ ಮಠ, ಕನ್ನಡದ ಸ್ವಾಮೀಜಿ ಎಂದೇ ಪ್ರಖ್ಯಾತಿ ಪಡೆದಿದ್ದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಮಠದ ಸ್ವಾಮೀಜಿ ಅವರು ಅಪಾರ ಭಕ್ತರನ್ನು, ಅನುಯಾಯಿಗಳನ್ನು ಹೊಂದಿದ್ದರು. ಹಲವಾರು ದಶಕಗಳ ಕಾಲ ಕನ್ನಡದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು.
ಮಠದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಶ್ರೀಗಳ ಅಂತ್ಯಸಂಸ್ಕಾರ ಇಂದೇ ನಡೆಯಲಿದೆ. ಅಲ್ಲಮಪ್ರಭು ಸ್ವಾಮೀಜಿಗಳ ಅಗಲಿಕೆಗೆ ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.