ಬೆಂಗಳೂರು : ವಿಶ್ವಕಪ್-2023 ಟೂರ್ನಿಯ 32ನೇ ಪಂದ್ಯದಲ್ಲಿ ಕಿವೀಸ್ ಬೌಲರ್ಗಳನ್ನು ಹರಿಣಗಳು ಹಿಗ್ಗಾಮುಗ್ಗ ದಂಡಿಸಿದರು. ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 357 ರನ್ ಕಲೆಹಾಕಿದೆ. ಈ ಮೂಲಕ ಕಿವೀಸ್ಗೆ 358 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಪುಣೆಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಲ್ಯಾಥಮ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ದಕ್ಷಿಣ ಆಫ್ರಿಕಾ ಬ್ಯಾಟರ್ಗಳು ಕಿವೀಸ್ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದರು.
ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾಕಕ್ಕೆ ಆರಂಭಿಕ ಆಟಗಾರರಾದ ಕ್ವಿಂಟನ್ ಡಿ ಕಾಕ್ ಹಾಗೂ ನಾಯಕ ಬವುಮಾ ಉತ್ತಮ ಆರಂಭ ನೀಡಿದರು. ಬವುಮಾ 24 ರನ್ ಗಳಿಸಿ ಪೆವಿಲಿಯನ್ನತ್ತ ಮುಖ ಮಾಡಿದರು. ಬಳಿಕ ಡಿ ಕಾಕ್ ಜೊತೆ ಸೇರಿಕೊಂಡ ಡಸ್ಸೆನ್ ಕಿವೀಸ್ ಬೌಲರ್ಗಳನ್ನು ಚೆಂಡಾಡಿದರು.
116 ಎಸೆತಗಳನ್ನು ಎದುರಿಸಿದ ಡಿ ಕಾಕ್ 3 ಭರ್ಜರಿ ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ ಆಕರ್ಷಕ ಶತಕ(114) ಸಿಡಿಸಿದರು. ಈ ಮೂಲಕ ವಿಶ್ವಕಪ್ನಲ್ಲಿ 4 ಶತಕ ಗಳಿಸಿದ 3ನೇ ಬ್ಯಾಟರ್ ಎಂಬ ಶ್ರೇಯಕ್ಕೆ ಪಾತ್ರರಾದರು. ಡಿ ಕಾಕ್ ನಿರ್ಗಮನದ ಬಳಿಕ ಅಬ್ಬರಿಸಿದ ಡಸ್ಸೆನ್ 118 ಎಸೆತಗಳಲ್ಲಿ 5 ಬೊಂಬಾಟ್ ಸಿಕ್ಸರ್ ಹಾಗೂ 9 ಬೌಂಡರಿಗಳ ನೆರವಿನೊಂದಿಗೆ ಭರ್ಜರಿ ಶತಕ (133) ಬಾರಿಸಿದರು.
ಮಿಲ್ಲರ್ ಬೊಂಬಾಟ್ ಅರ್ಧಶತಕ
ಬಳಿಕ ಡೇವಿಡ್ ಮಿಲ್ಲರ್ 30 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿ ನೆರನೊಂದಿಗೆ ಅರ್ಧಶತಕ (53) ಸಿಡಿಸಿ ತಂಡದ ಮೊತ್ತವನ್ನು 300ರ ಗಡಿ ದಾಡಿಸಿದರು. ಕ್ಲಾಸೆನ್ ಅಜೇಯ 15 ಹಾಗೂ ಮಾಕ್ರಮ್ ಅಜೇಯ 6 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಟೀಮ್ ಸೌಥಿ 2, ಬೋಲ್ಟ್ ಹಾಗೂ ನೀಶಮ್ ತಲಾ ಒಂದು ವಿಕೆಟ್ ಪಡೆದರು.