ಬೆಂಗಳೂರು : ಮಧ್ಯಪ್ರದೇಶ ಚುನಾವಣೆಯಲ್ಲಿ ನಾನು ಬ್ಯುಸಿಯಿದ್ದೆ. ರಾಜ್ಯದಲ್ಲಿ ಸಚಿವರು, ಶಾಸಕರು ಪಕ್ಷ ವಿರೋಧಿ ಹೇಳಿಕೆ ಕೊಡ್ತಿದ್ದಾರೆ. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಸಚಿವರಾಗಲಿ, ಶಾಸಕರಾಗಲಿ ಯಾರೂ ಹೇಳಿಕೆಗಳನ್ನ ನೀಡಬಾರದು. ಪಕ್ಷದ ಶಿಸ್ತನ್ನ ಎಲ್ಲರೂ ಪಾಲಿಸಬೇಕು. ಇಲ್ಲಸಲ್ಲದ ಹೇಳಿಕೆಗಳನ್ನ ನೀಡಬಾರದು. ಯಾವುದೇ ಸಾರ್ವಜನಿಕ ಹೇಳಿಕೆ ನೀಡಬಾರದು. ಏನೇ ಇದ್ದರೂ ಪಕ್ಷದೊಳಗೆ ಚರ್ಚೆಯಾಗಲಿ ಎಂದು ತಿಳಿಸಿದ್ದಾರೆ.
20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಗುರಿ
ಲೋಕಸಭೆ ಚುನಾವಣೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆದಿದೆ. ಚುನಾವಣಾ ತಂತ್ರಗಾರಿಕೆ ಬಗ್ಗೆ ಮಾತುಕತೆ ನಡೆದಿದೆ. ಜನ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಲೋಕಸಭೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ನಮ್ಮ ಗುರಿ. ಲೋಕಸಭೆಗೆ ಅಭ್ಯರ್ಥಿಗಳ ಘೋಷಣೆಗೆ ತಡ ಆಗಬಾರದೆಂಬುದನ್ನ ಚರ್ಚಿಸಲಾಗಿದೆ. ಕಾಂಗ್ರೆಸ್ ಗ್ಯಾರಂಟಿಗಳಿಂದ ಜನರಿಗೆ ಅನುಕೂಲ ಆಗಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.