ಕನಕಪುರ : ಇನ್ಮುಂದೆ ರಾಮನಗರ ಜಿಲ್ಲೆ ಇರುವುದಿಲ್ಲ. ಯಾರೋ ಹೆಸರು ಮಾಡಿಕೊಳ್ಳಬೇಕು ಎಂದು ರಾಮನಗರ ಜಿಲ್ಲೆ ಮಾಡಿದ್ದರು. ಈಗ ಪುನಃ ಬೆಂಗಳೂರು ಜಿಲ್ಲೆಯಾಗಿ ಮರು ನಾಮಕರಣ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಟಕ್ಕರ್ ಕೊಟ್ಟಿದ್ದಾರೆ.
ಕನಕಪುರದ ಶಿವನಹಳ್ಳಿ ಗ್ರಾಮದಲ್ಲಿ ವೀರಭದ್ರಸ್ವಾಮಿ ದೇವಸ್ಥಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ರಾಮನಗರ ಇಲ್ಲ.. ಬೆಂಗಳೂರು ಅಷ್ಟೇ.. ಯಾರೋ ಹೆಸರು ಮಾಡಿಕೊಳ್ಳಬೇಕು ಅಂತ ರಾಮನಗರ ಜಿಲ್ಲೆ ಮಾಡಿದ್ರು. ಮತ್ತೆ ಬೆಂಗಳೂರು ಜಿಲ್ಲೆಯಾಗಿ ಮರು ನಾಮಕರಣ ಮಾಡುತ್ತೇನೆ ಎಂದು ದೇವರ ಮೇಲೆ ಪ್ರಮಾಣ ಮಾಡಿದ್ದಾರೆ.
ರೈತರಿ ಭೂಮಿ ಮಾರಾಟ ಮಾಡದಂತೆ ತಾಕೀತು ಮಾಡಿದ ಡಿ.ಕೆ ಶಿವಕುಮಾರ್ ಅವರು, ಒಂದೊಂದು ಅಡಿ ಲೆಕ್ಕದಲ್ಲಿ ಭೂಮಿ ಬೆಲೆ ಹೆಚ್ಚಾಗುತ್ತದೆ. ಇದನ್ನು ಬೆಂಗಳೂರು ಜಿಲ್ಲೆಯಾಗಿ ಮಾಡುವುದರಿಂದ ಹೆಚ್ಚಿನ ಅಭಿವೃದ್ಧಿ ಆಗುತ್ತದೆ. ಯಾವೊಬ್ಬ ರೈತರೂ ತಮ್ಮ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಮುಂದಿನ ದಿನಗಳನ್ನು ನಷ್ಟವನ್ನು ಅನುಭವಿಸಬೇಡಿ. ನಿಮ್ಮ ಭೂಮಿಯನ್ನು ಮಾರಾಟ ಮಾಡಿ ಮುಂದಿನ ದಿನಗಳನ್ನು ನೀವೇ ಕೂಲಿಯಾಳಾಗಬೇಡಿ ಎಂದು ಸಲಹೆ ನೀಡಿದ್ದಾರೆ.
ಮನುಷ್ಯರಾಗಿ ಬದುಕಬೇಕು
ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ಹೀಗಾಗಿ ನಾವು ಜಾತಿ, ಮತ, ಪಂಥ ಮರೆತು ಮಾನವ ಧರ್ಮದ ನೆಲೆಯಲ್ಲಿ ಮನುಷ್ಯರಾಗಿ ಬದುಕಬೇಕು ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.