ರಾಯಚೂರು : ನನ್ನ ಅಧಿಕಾರದ ಅವಧಿಯಲ್ಲಿ ಮಠ ಮಾನ್ಯಗಳಿಗೆ ಅನುದಾನ ನೀಡುವ ಸಂಸ್ಕೃತಿ ಹುಟ್ಟುಹಾಕಿದ್ದು ನಾನೇ. ಯಾವುದೇ ಧರ್ಮದ ಬಗ್ಗೆ ತುಷ್ಟೀಕರಣ, ಓಲೈಕೆ ಮಾಡದೇ ಎಲ್ಲರಿಗೂ ಸಮಾನ ಅನುದಾನ ಹಂಚಿಕೆ ಮಾಡಿ. ಬಸವಣ್ಣನವರ ಆಶಯ ಪಾಲಿಸಿರಿ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪಹೇಳಿದರು.
ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಹಮ್ಮಿಕೊಂಡಿದ್ದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಠ ಮಾನ್ಯಗಳಿಲ್ಲದೇ ಇದ್ದರೆ ಭಾರತ ನಾಶವಾಗಿ ಹೋಗುತ್ತಿತ್ತು ಎಂದು ಹೇಳಿದರು.
ಹಿಂದೂ ಧರ್ಮದ ಮೇಲೆ ನಡೆದ ದಾಳಿ ಬೇರೆ ಯಾವ ಧರ್ಮದ ಮೇಲೂ ನಡೆದಿಲ್ಲ. ಅದನ್ನ ಮೆಟ್ಟಿ ನಿಂತಿದ್ದೇವೆ ಅಂದರೆ ಅದಕ್ಕೆ ನಮ್ಮ ಪರಂಪರೆ, ಆಚರಣೆ ಸಾಕ್ಷಿ. ಇತ್ತೀಚೆಗೆ ರಾಜಕಾರಣದಲ್ಲಿ ಧರ್ಮ ಸೇರಿಕೊಂಡಿದೆ. ಓರ್ವ ಸಂತ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಾತ್ವಿಕ ತಪ್ಪಸ್ವಿಯಂತೆ ದೇಶ ಮುನ್ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಸರ್ಕಾರ ದಿವಾಳಿಯಾಗಿದೆ
ಸರ್ಕಾರ ದಿವಾಳಿಯಾಗಿದೆ ಎಂದು ಕಾಂಗ್ರೆಸ್ಸಿಗರೇ ಒಪ್ಪಿಕೊಂಡಿದ್ದಾರೆ. ಉಚಿತ ಗ್ಯಾರಂಟಿ ಕೊಡುತ್ತೇನೆ ಎಂದು ಹೇಳಿ ಬೊಕ್ಕಸ ಖಾಲಿ ಮಾಡಿದ್ದಾರೆ. ರಸ್ತೆ, ನೀರಾವರಿ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಗುತ್ತಿಗೆದಾರರು ಆರೋಪ ಮಾಡಿದ್ದರು. ಈಗಲೂ ಗುತ್ತಿಗೆದಾರರು ನೇರವಾಗಿ ಆರೋಪ ಮಾಡುತ್ತಿದ್ದಾರೆ. ಕೆಲಸ ಕಾರ್ಯ ನಿಲ್ಲಿಸುತ್ತೇವೆ ಅಂತ ಗುತ್ತಿಗೆದಾರರು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.