ಯಾದಗಿರಿ : ಕರ್ನಾಟಕದಲ್ಲಿ ಹಿಂದೂಗಳು ಮುಕ್ತವಾಗಿ ಬದುಕಬೇಕೋ? ಬೇಡವೋ?ಎಂಬ ವಾತಾವರಣ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ ಹಿಂದೂಗಳ ರಕ್ಷಣೆ ಮಾಡೋರು ಯಾರು? ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದರು.
ಶಿವಮೊಗ್ಗದಲ್ಲಿ ಕಲ್ಲು ತೂರಾಟ ಪ್ರಕರಣ ವಿಚಾರವಾಗಿ ಯಾದಗಿರಿಯ ಜಿಲ್ಲೆಯ ಶಹಾಪೂರನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಬಂದ್ಮೇಲೆ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರಿಗೆ ಮುಕ್ತವಾಗಿ ಅಧಿಕಾರ ಕೊಡುತ್ತಿಲ್ಲ. ಅವರ ಕೈಯಲ್ಲಿನ ಶಸ್ತ್ರಾಸ್ತ್ರ ಉಪಯೋಗ ಮಾಡದಂತೆ ಸರ್ಕಾರ ಅಸಹಾಯಕತೆ ನಿರ್ಮಾಣ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.
ಪೊಲೀಸರು, ಎಸ್ಪಿ(ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ) ಮೇಲೆ ಕಲ್ಲು ತೂರಾಟ ಮಾಡ್ತಾರೆ ಅಂದ್ರೆ ಎಷ್ಟು ಧೈರ್ಯ ಇರಬೇಕು? ಕೆಜಿ ಹಳ್ಳಿ, ಡಿಜಿ ಹಳ್ಳಿ, ಹುಬ್ಬಳ್ಳಿ ಪೋಲಿಸ್ ಠಾಣೆ ಸುಟ್ಟವರ ಮೇಲಿನ ಕೇಸ್ ವಾಪಸ್ಗೆ ಕಾಂಗ್ರೆಸ್ ಸರ್ಕಾರ ಆದೇಶ ಮಾಡಿದೆ. ಚಾಕು, ಚೂರಿ ತೆಗೆದುಕೊಂಡು ಬಯಲಿಗೆ ಬರ್ತಾರೆ. ಕೋಲಾರದಲ್ಲಿ ಖಡ್ಗ ಪ್ರದರ್ಶನ ಮಾಡಿದ್ದಾರೆ. ಹಿಂದೂ ಧರ್ಮ ನಾಶ ಮಾಡ್ತಿನಿ ಅಂತಾರೆ, ಪೊಲೀಸರಿಗೆ ಕಲ್ಲು ಹೊಡಿತಾರೆ ಎಂದು ವಾಗ್ದಾಳಿ ನಡೆಸಿದರು.
ಹಿಂದೂಗಳೇ ರಕ್ಷಣೆಗೆ ಹೊರಬರಬೇಕಾಗುತ್ತೆ
ಕಾಂಗ್ರೆಸ್ ಸರ್ಕಾರ ಒಂದು ಕೋಮಿಗೆ(ಸಮುದಾಯ) ಬೆಂಬಲ ಕೊಡೋದು ಹಿಂದೂಗಳ ರಕ್ಷಣೆ ಪ್ರಶ್ನೆಯಾಗಿದೆ. ಇದೇ ರೀತಿ ಆಡಳಿತ ನಡೆದರೆ ಹಿಂದೂಗಳೇ ರಕ್ಷಣೆಗೆ ಹೊರಬರಬೇಕಾಗುತ್ತದೆ ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.