ಶಿವಮೊಗ್ಗ : ಈದ್ ಮಿಲಾದ್ ಆಚರಿಸುವ ವೇಳೆ ದುಷ್ಕರ್ಮಿಗಳು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಈ ಘಟನೆ ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಜದುರಿಸಿದ್ದಾರೆ. ಪರಿಣಾಮ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಗಲಾಟೆಯಲ್ಲಿ ಸಿಲುಕಿದ್ದ 7 ಜನರನ್ನು ಪೊಲೀಸರು ರಕ್ಷಿಸಿದ್ದಾರೆ.
ಕಲ್ಲು ತೂರಾಟ ಹಿನ್ನೆಲೆಯಲ್ಲಿ ರಾಗಿಗುಡ್ಡ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸ್ಥಳಕ್ಕೆ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಭೇಟಿ ನೀಡಿ ಗುಂಪನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ ಅವರು 144 ಸೆಕ್ಷನ್ ಜಾರಿಗೆ ಆದೇಶಿಸಿದ್ದಾರೆ.
ಕಿಡಿಗೇಡಿಗಳು ಪೊಲೀಸರ ವಶ
SP ಜಿ.ಕೆ.ಮಿಥುನ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದೆ. ಇದರಿಂದ ಕೆಲ ವಾಹನ, ಮನೆಗಳು ಜಖಂಗೊಂಡಿದೆ. ಪೊಲೀಸರು ಸೇರಿದಂತೆ ಕೆಲವರ ಮೇಲೆ ಕಲ್ಲು ಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ವಿಡಿಯೋ ಹಾಗೂ ಮಾಹಿತಿ ಆಧರಿಸಿ ಕಿಡಿಗೇಡಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಂದು ತಿಳಿಸಿದ್ದಾರೆ.