ಬೆಂಗಳೂರು : ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಒಲಿದಿದೆ. ಭಾರತ ಮಹಿಳಾ ಕ್ರಿಕೆಟ್ ತಂಡ ಲಂಕಾ ದಹನ ಮಾಡಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.
ಏಷ್ಯನ್ ಗೇಮ್ಸ್ನಲ್ಲೇ ಇದೇ ಮೊದಲ ಬಾರಿಗೆ ಕ್ರಿಕೆಟ್ ಸೇರ್ಪಡೆ ಮಾಡಲಾಗಿತ್ತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದು ಕೌರ್ ಬಳಗ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿತ್ತು. ಸ್ಮೃತಿ ಮಂದಾನ 45 ಎಸೆತಗಳಲ್ಲಿ 46 ರನ್ ಗಳಿಸಿದರೆ, ಜೆಮಿಮಾ ರೋಡ್ರಿಗಿಸ್ 40 ಎಸೆತಗಳಲ್ಲಿ 42 ರನ್ ಗಳಿಸಿದರು. ಶ್ರೀಲಂಕಾ ಪರ ಉದೇಶಿಕಾ ಪ್ರಬೋಧನಿ ಹಾಗೂ ಸುಗಂಧಿಕಾ ತಲಾ 2 ವಿಕೆಟ್ ಪಡೆದರು.
ಸಾಧಾರಣ ಟಾರ್ಗೆಟ್ ಬೆನ್ನತ್ತಿದ್ದ ಶ್ರೀಲಂಕಾ 8 ವಿಕೆಟ್ ಕಳೆದುಕೊಂಡು 97 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ನಲ್ಲಿ ಭಾರತ ಎರಡನೇ ಚಿನ್ನಗೆದ್ದು ಬೀಗಿದೆ.