ಬೆಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆ ಹಾಗೂ ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕು ಎಂಬ ಕೂಗಿನ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ನೋಡಪ್ಪ..! ಈಗ ಒಬ್ಬರು ಮುಖ್ಯಮಂತ್ರಿ, ಒಬ್ಬರು ಉಪಮುಖ್ಯಮಂತ್ರಿ ಇದ್ದಾರೆ. ದಲಿತ ಮುಖ್ಯಮಂತ್ರಿ ವಿಚಾರವೇ ಈಗ ಅಪ್ರಸ್ತುತ. ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಆಗಿಲ್ವಾ?’ ಎಂದರು.
ಮೂರು ಉಪಮುಖ್ಯಮಂತ್ರಿ ಸ್ಥಾನಕ್ಕೆ ಡಿಮ್ಯಾಂಡ್ ಇರುವ ಬಗ್ಗೆ ಮಾತನಾಡಿ, ‘ಸಚಿವ ಕೆ.ಎನ್ ರಾಜಣ್ಣ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ನನ್ನ ಪ್ರಕಾರ ಮೂರು ಡಿಸಿಎಂಗಳು ಬೇಕಾಗಿಲ್ಲ. ಸದ್ಯಕ್ಕೆ ಸಿಎಂ ಬದಲಾವಣೆ ಅಂಥದ್ದು ಏನೂ ಇಲ್ಲ. ಡಿಸಿಎಂಗಳ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡಲಿದ್ದಾರೆ’ ಎಂದು ಹೈಕಮಾಂಡ್ ಕಡೆ ಬೊಟ್ಟು ಮಾಡಿದರು.
ನನಗಂತೂ ಡಿಸಿಎಂ ಹುದ್ದೆ ಬೇಡ
ಮುಂದುವರಿದು, ‘ನನಗಂತೂ ಡಿಸಿಎಂ ಹುದ್ದೆ ಬೇಡ. ಸಚಿವಸ್ಥಾನದಲ್ಲೇ ತೃಪ್ತಿಯಾಗಿದ್ದೇನೆ. ಸರ್ಕಾರದ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಬೇಕು. ಲೋಕಸಭಾ ಚುನಾವಣೆಗೆ ನಾವು ತಯಾರಾಗಬೇಕಿದೆ’ ಎಂದು ರಾಮಲಿಂಗಾರೆಡ್ಡಿ ಜಾಣ್ಮೆಯ ಉತ್ತರ ನೀಡಿದರು.