ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಶಿವಮೊಗ್ಗದ ಅರಾಫತ್ ಅಲಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದ ಬೆನ್ನಲ್ಲೇ ಸ್ಫೋಟದ ಸಂಚು ಬಹಿರಂಗಗೊಂಡಿದೆ. ಆರೋಪಿಗಳು ಕದ್ರಿ ಮಂಜುನಾಥ ದೇವಾಲಯವನ್ನೇ ಗುರಿಯಾಗಿ ದಾಳಿ ನಡೆಸಲು ಸಿದ್ಧತೆ ನಡೆಸಿದ್ದರು ಎಂಬುದನ್ನು ಎನ್ಐಎ ದೃಢಪಡಿಸಿದೆ.
ವಿದೇಶದಲ್ಲಿದ್ದುಕೊಂಡೇ ಇಲ್ಲಿನ ಚಟುವಟಕೆಗಳನ್ನು ನಿಯಂತ್ರಿಸುತ್ತಿದ್ದ ಅರಾಫತ್ ಅಲಿ, ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್, ಮಂಗಳೂರಿನ ಕುಕ್ಕರ್ ಸ್ಫೋಟ ಹಾಗೂ ಗೋಡೆ ಬರಹದ ಮೂಲ ರೂವಾರಿಯಾಗಿದ್ದ ಎಂಬ ಮಾಹಿತಿ ಲಭಿಸಿದೆ. ಅರಾಫತ್ ಅಲಿಯಿಂದ ಪ್ರಚೋದನೆಗೆ ಒಳಗಾಗಿದ್ದ ಶಾರಿಕ್ ಕುಕ್ಕರ್ ಬಾಂಬ್ ಸ್ಫೋಟಿಸಲು ಸಿದ್ಧತೆ ನಡೆಸಿದ್ದ.
ಇದಕ್ಕೂ ಮೊದಲು ನಗರದಲ್ಲಿ ಉಗ್ರರ ಕೃತ್ಯಕ್ಕೆ ಸಂಬಂಧಿಸಿದ ಗೋಡೆ ಬರಹ ಪ್ರಕರಣ ದಾಖಲಾಗಿತ್ತು. ಆರೋಪಿಗಳಾದ ಮಾಝ್ ಮುನೀರ್ ಮತ್ತು ಯಾಸೀನ್ ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಇವರಿಗೂ ಅರಾಫತ್ ಪ್ರೇರಣೆ ನೀಡಿದ್ದ. ಆನಂತರದಲ್ಲಿ ಶಿವಮೊಗ್ಗದಲ್ಲಿ ಸ್ಫೋಟಿಸುವ ಪ್ರಯೋಗ ನಡೆದಿತ್ತು. ಅಂತಿಮವಾಗಿ ಕುಕ್ಕರ್ ಬಾಂಬ್ ಸ್ಫೋಟಿಸಲು ಶಾರಿಕ್ ಸಂಚು ರೂಪಿಸಿದ್ದ.
2022 ನವೆಂಬರ್ 19ರಂದು ಕುಕ್ಕರ್ ಬಾಂಬ್ ಹಿಡಿದು ಆಟೊರಿಕ್ಷಾದಲ್ಲಿ ತರುವ ವೇಳೆ ಅದು ಸ್ಫೋಟಗೊಂಡಿತ್ತು. ಆದರೆ, ಆಗ ಶಾರಿಕ್ ಗುರಿಯಾವುದಿತ್ತು ಎಂಬ ಬಗ್ಗೆ ಸ್ಪಷ್ಟತೆ ದೊರೆತಿರಲಿಲ್ಲ.