Saturday, November 23, 2024

ಜಿ-20 ಶೃಂಗಸಭೆ : ದೆಹಲಿಗೆ ಬಂದಿಳಿದ ‘ದೊಡ್ಡಣ್ಣ’ನ ಬರಮಾಡಿಕೊಂಡ ಮೋದಿ

ನವದೆಹಲಿ : ಇಡೀ ವಿಶ್ವದ ಗಮನ ಸೆಳೆದಿರುವ ರಾಷ್ಟ್ರ ರಾಜಧಾನಿ, ಮಹತ್ವದ ಜಿ-20 ಶೃಂಗಸಭೆಗೆ ಸಜ್ಜಾಗಿದೆ. ಈ ಮಹತ್ವದ ಮೀಟಿಂಗ್‌ಗೆ ಭಾರತ ಆತಿಥ್ಯ ವಹಿಸುತ್ತಿದೆ.

ನವದೆಹಲಿಯಲ್ಲಿ ಎರಡು ದಿನಗಳು ಜಿ‌-20 ಶೃಂಗಸಭೆ ನಡೆಸಲು ಮೋದಿ ಸರ್ಕಾರದಿಂದ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಭಾರತಕ್ಕೆ ಆಗಮಿಸ್ತಿರುವ ಪ್ರತಿಯೊಬ್ಬ ಗಣ್ಯರಿಗೆ ವಿಶೇಷ ಗೌರವ ನೀಡಲಾಗ್ತಿದೆ.

ಇಟಲಿ ಪ್ರಧಾನಿ ಜಾರ್ಜಿಯಾ ಮೇಲೋನಿ, ಮಾರಿಷಸ್‌ನ ಪ್ರಧಾನಿ ಪ್ರವಿಂದ್ ಜುಗ್ನೌತ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಪ್ರತ್ಯೇಕ ಸಭೆ ನಡೆಸಲಿದ್ದಾರೆ.

ಇಡೀ ವಿಶ್ವದ ಗಮನ ಸೆಳೆದಿರುವ ರಾಷ್ಟ್ರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರೊಂದಿಗಿನ ಸಭೆಯು ರಕ್ಷಣಾ ತಂತ್ರಜ್ಞಾನದ ಮೇಲೆ ಚರ್ಚೆ ಕೇಂದ್ರೀಕರಿಸುವ ಸಾಧ್ಯತೆಯಿದೆ. ಯುಎಸ್ ಕಾಂಗ್ರೆಸ್ ಜನರಲ್, ಎಲೆಕ್ಟ್ರಿಕ್ ಮತ್ತು ಹೆಚ್ಎಎಲ್ ಫೈಟರ್ ಜೆಟ್ ಎಂಜಿನ್ ಒಪ್ಪಂದವನ್ನು ಅನುಮೋದಿಸಿದ್ದು, ಈ ಯೋಜನೆಯು ಭಾರತಕ್ಕೆ ತಂತ್ರಜ್ಞಾನದ ಗಮನಾರ್ಹ ಬದಲಾವಣೆಯನ್ನು ನಿರೀಕ್ಷಿಸುತ್ತದೆ. ಇದರ ಜೊತೆಗೆ 5G, 6G ವಿಷಯಗಳ ಕುರಿತು ಚರ್ಚೆಗಳು ವಿಶ್ವದ ದೊಡ್ಡಣ್ಣ ಅಮೆರಿಕದ ಜೊತೆಗೆ ನಡೆಯಲಿವೆ.

ರಿಷಿ ಸುನಕ್ ಮೊದಲ ಭೇಟಿ

ಇನ್ನೂ, ಸೆಪ್ಟೆಂಬರ್ 9 ರಂದು, ಪ್ರಧಾನಿ ಮೋದಿ ಅವರು ಯುಕೆ, ಜಪಾನ್, ಜರ್ಮನಿ ಮತ್ತು ಇಟಲಿ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.  2022ರ ಕೊನೆಯಲ್ಲಿ ಬ್ರಿಟನ್​ ಪ್ರಧಾನಿಯಾಗಿ ರಿಷಿ ಸುನಕ್ ಅಧಿಕಾರ ವಹಿಸಿಕೊಂಡ ಬಳಿಕ ಭಾರತಕ್ಕೆ ಇದು ಅವರ ಮೊದಲ ಭೇಟಿಯಾಗಿರುವುದರಿಂದ ಭೇಟಿಯು ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಯುಕೆ ಮತ್ತು ಭಾರತದ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಚರ್ಚೆ ನಡೆಯಲಿದೆ ಅಂತ ನಿರೀಕ್ಷೆಗಳನ್ನು ಎರಡು ದೇಶಗಳು ಇಟ್ಟುಕೊಂಡಿವೆ‌.

ಏಳುಸುತ್ತಿನ ಕೋಟೆಯಾದ ನವದೆಹಲಿ

ಶೃಂಗಸಭೆ ಹಿನ್ನೆಲೆ, ದೆಹಲಿಯಲ್ಲಿ ಸಂಪೂರ್ಣ ಭದ್ರತೆ ತೆಗೆದುಕೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶುಕ್ರವಾರದಿಂದಲೇ ನವದೆಹಲಿಯಲ್ಲಿ ಸಂಚಾರ ನಿರ್ಬಂಧಗಳನ್ನು ಹೇರಲಾಗಿದೆ. ಗುರುವಾರ ರಾತ್ರಿ 9ರಿಂದ ಭಾನುವಾರ ಮಧ್ಯರಾತ್ರಿಯವರೆಗೆ ಭಾರಿ, ಮಧ್ಯಮ ಮತ್ತು ಲಘು ಸರಕು ವಾಹನಗಳಿಗೆ ದೆಹಲಿ ಪ್ರವೇಶಿಸಲು ಅವಕಾಶವಿಲ್ಲ. ನವದೆಹಲಿಯನ್ನು ಶುಕ್ರವಾರ ಬೆಳಗ್ಗೆಯಿಂದ ಭಾನುವಾರದವರೆಗೆ ನಿಯಂತ್ರಿತ ವಲಯ ಎಂದು ಪರಿಗಣಿಸಲಾಗಿದೆ.

ಜಿ-20 ಶೃಂಗ ಸಭೆಯ ಅಂತಿಮ ದಿನ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಭೋಜನಕೂಟದ ಸಭೆಯನ್ನು ನಡೆಸುವ ವೇಳಾಪಟ್ಟಿ ಸಿದ್ದವಾಗಿದೆ. ಒಟ್ಟಾರೆ ಮಹತ್ವದ ಜಿ-20 ಶೃಂಗಸಭೆಗೆ ನವದೆಹಲಿ ಸಜ್ಜಾಗಿದ್ದು, ಇದು ಭಾರತಕ್ಕೆ ಹೆಚ್ಚು ಲಾಭದಾಯಕವಾಗಲಿದೆ ಎಂದೇ ಹೇಳಲಾಗುತ್ತಿದೆ.

RELATED ARTICLES

Related Articles

TRENDING ARTICLES