ದಾವಣಗೆರೆ : 60 ವರ್ಷ ಹೆಬ್ಬೆಟ್ಟುಗಳ ಆಡಳಿತ ಇತ್ತು. ಈಗ ಜಗತ್ತು ಮೆಚ್ಚುವ ಆಡಳಿತಗಾರ ಬಂದಿದ್ದಾರೆ. ಹೀಗಾಗಿ, ಬಿಜೆಪಿಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಕಿಡಿಕಾರಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಿಂದೂ ಧರ್ಮದ ವಿಚಾರ ಮುನ್ನೆಲೆಗೆ ತಂದು ಬಿಜೆಪಿಯನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಮುಂದೆ ಕಾಂಗ್ರೆಸ್ ಮುಕ್ತ ಆಗಲಿದೆ. ಕಾಂಗ್ರೆಸ್ ಕಚೇರಿಯಲ್ಲಿ ದೀಪಕ್ಕೆ ದಿಕ್ಕು ಇಲ್ಲದಂತೆ ಆಗುತ್ತಿದೆ ಎಂದು ಕುಟುಕಿದರು.
ಲಿಂಗಾಯಿತ ನಾಯಕರ ಆರೋಪ ಕುರಿತು ಮಾತನಾಡಿದ ಅವರು, ಯಾರು ಯಾರನ್ನು ತುಳಿದರು. ನಿಜಲಿಂಗಪ್ಪ ಅವರನ್ನು ಹೊರಗೆ ಹಾಕಿ ಕಾಂಗ್ರೆಸ್ ಇಬ್ಬಾಗ ಮಾಡಿದರು. ವೀರೇಂದ್ರ ಪಾಟೀಲ್ ವಜಾ ಮಾಡಿದರು. ರಾಜಶೇಖರ್ ಮೂರ್ತಿ ಅಂತ ದಕ್ಷ ಆಡಳಿತಗಾರ ಕಂದಾಯ ಸಚಿವರಾಗಿದ್ದಾಗ ಒಂದೇ ವಾರದಲ್ಲಿ ವಜಾ ಮಾಡಿದರು ಎಂದು ವಾಗ್ದಾಳಿ ನಡೆಸಿದರು.
ಲಿಂಗಾಯತರಿಗೆ ಕಾಂಗ್ರೆಸ್ ಮಾಡಿದ್ದೇನು?
ಲಿಂಗಾಯಿತರು ಎರಡನೇ ದರ್ಜೆ ನಾಯಕರು ಎಂದು ಬಿಂಬಿತ ಮಾಡಿದವರೇ ಕಾಂಗ್ರೆಸ್ ನವರು. ಶಾಮನೂರು ಶಿವಶಂಕರಪ್ಪ 20 ವರ್ಷ ಖಜಾಂಚಿ ಆಗಿದ್ದರು. ಆದರೆ, ಅವರಿಗೆ ಕಾಂಗ್ರೆಸ್ ಮಾಡಿದ್ದೇನು? ನಿರಂತರವಾಗಿ ಲಿಂಗಾಯಿತರಿಗೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ ಆಡಳಿತ ವಿರೋಧಿಸಿ ಇಡೀ ರಾಜ್ಯದಲ್ಲಿ ನಾಳೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.