ಬೆಂಗಳೂರು : ರಾಜ್ಯದಲ್ಲಿ ಮಳೆರಾಯ ತಂಪೆರೆಯುತ್ತಿದ್ದಾನೆ. ಮುಂದಿನ ಮೂರ್ನಾಲ್ಕು ದಿನ ರಾಜ್ಯಾದ್ಯಂತ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ.
ಸಿಲಿಕಾನ್ ಸಿಟಿ ಮಂದಿಯನ್ನು ಸಂಜೆ ಮಳೆ ಕಾಡಲಿದೆ. ಮಳೆ ಜೊತೆ ಶೀತಗಾಳಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಲಾಖೆ ಸೂಚನೆ ಕೊಟ್ಟಿದೆ. ಉತ್ತರ ಒಳನಾಡು, ಕರಾವಳಿಯಲ್ಲಿ ಭಾರೀ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಸಾಧ್ಯತೆ ಇದೆ.
ಮುಂದಿನ 24 ಗಂಟೆಗಳು ಉತ್ತರ ಒಳನಾಡಿನ ಬೀದರ್, ರಾಯಚೂರು, ಕೊಪ್ಪಳ, ಕಲಬುರಗಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಉತ್ತರ ಒಳನಾಡು ಕರಾವಳಿ ಭಾಗಗಳಿಗೆ ಗುಡುಗು ಮಿಂಚಿನ ಎಚ್ಚರಿಕೆ ನೀಡಿದೆ. ದಕ್ಷಿಣ ಒಳನಾಡು ಭಾಗದಲ್ಲಿ ಗಾಳಿಯ ವೇಗ 40-50 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಇಲಾಖೆ ನೀಡಿದೆ.
ಬನ್ನೇರುಘಟ್ಟ ರಸ್ತೆ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರು ಹಾಗೂ ಬನ್ನೇರುಘಟ್ಟ ರಸ್ತೆ ಜಲಾವೃತವಾಗಿದೆ. ಕಾಳೇನ ಅಗ್ರಹಾರ ಸಮೀಪದ ಡೆಕಾತ್ಲಾನ್ ಬಳಿ ರಸ್ತೆ ಜಲಾವೃತವಾಗಿದ್ದು, ಕೆರೆಯಂತಾದ ರಸ್ತೆಯಲ್ಲಿ ವಾಹನ ಸವಾರರು ಹರಸಾಹಸಪಟ್ಟು ಸಂಚರಿಸಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಮಳೆ ನೀರು ಹೊರ ಹೋಗಲು ದಾರಿಯಿಲ್ಲದೇ ರಸ್ತೆ ಕೆರೆಯಂತಾಗಿತ್ತು.
ಧರೆಗುರುಳಿದ ಮರ
ನಿನ್ನೆ ಸುರಿದ ಭಾರಿ ಮಳೆಯಿಂದ ಮಲ್ಲೇಶ್ವರಂನ 7 ನೇ ಅಡ್ಡರಸ್ತೆಯಲ್ಲಿ ಬೃಹತ್ ಮರ ಧರೆಗೆ ಉರುಳಿದ್ದು, ಒಂದು ದ್ವಿಚಕ್ರ ವಾಹನ ಹಾಗೂ ಕಾರು ಸಂಪೂರ್ಣ ನುಚ್ಚು ನೂರಾಗಿದೆ. ಕೂದಲೆಳೆಯ ಅಂತರದಲ್ಲಿ ಭಾರಿ ಅನಾಹುತ ತಪ್ಪಿದ್ದು, ಜನಸಂದಣಿ ಇರುವ ಪ್ರದೇಶದಲ್ಲಿ ಅನಾಹುತ ಆಗುವ ಮೊದಲೇ, ಒಣಗಿರುವ ಮರಗಳನ್ನು ಬಿಬಿಎಂಪಿ ತೆರವು ಮಾಡಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.