ಪಲ್ಲೆಕಿಲಿ (ಕ್ಯಾಂಡಿ):ಭಾರತ ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಸಾಂಪ್ರದಾಯಿಕ ಬದ್ಧವೈರಿಗಳ ಕಾದಾಟ ಕಣ್ತುಂಬಿಕೊಳ್ಳಲು ಉಭಯ ದೇಶಗಳ ಅಭಿಮಾನಿಗಳು ಕಾತುರರಾರಿಗಿದ್ದಾರೆ.
ಇಂದು ಮಧ್ಯಾಹ್ನ 2:30ಕ್ಕೆ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಈ ಹೈ-ವೋಲ್ಟೇಜ್ ಹಣಾಹಣಿ ಶುರುವಾಗಲಿದೆ. ಏಷ್ಯಾ ಕಪ್ 2023 ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಈಗಾಗಲೇ ಶುಭಾರಂಭ ಮಾಡಿದೆ. ಇನ್ನು ಟೀಮ್ ಇಂಡಿಯಾ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯದಲ್ಲೇ ಪಾಕ್ ಸವಾಲು ಎದುರಿಸಲಿದೆ.
ಒತ್ತಡದ ಪಂದ್ಯಕ್ಕೆ ಕೆ.ಎಲ್.ರಾಹುಲ್ ಗಾಯದ ಸಮಸ್ಯೆ ಕಾರಣ ಅಲಭ್ಯರಾಗಿರುವುದು ತಂಡಕ್ಕೆ ಎದುರಾದ ಬಹುದೊಡ್ಡ ಹಿನ್ನಡೆ ಆಗಿದೆ. ಆಡುವ 11ರ ಬಳಗದ ಆಯ್ಕೆ ವಿಚಾರದಲ್ಲಿ ಮತ್ತು ಕೆಲ ಪ್ರಮುಖ ಆಟಗಾರರ ಫಿಟ್ನೆಸ್ ವಿಚಾರದಲ್ಲಿ ಟೀಮ್ ಇಂಡಿಯಾಗೆ ಕೆಲ ಗೊಂದಲಗಳಿವೆ. ಇವೆಲ್ಲದಕ್ಕೂ ಪಂದ್ಯದ ಬಳಿಕ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
ಈ ಮಧ್ಯೆ ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ಬಾಲಗೊಳ್ಳ ಚಂಡಮಾರುತ ಅಪ್ಪಳಿಸಿದ್ದು, ಏಷ್ಯಾ ಕಪ್ ಪಂದ್ಯಕ್ಕೆ ಮಳೆ ಅಡಚಣೆ ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ. ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗಳಿಗೆ ಮಳೆರಾಯ ತಣ್ಣೀರೆರಚದೇ ಇರಲಿ ಎಂದು ಪ್ರಾರ್ಥಿಸಬೇಕಷ್ಟೆ. ಇನ್ನು ಮಳೆ ಕಾಟ ಕೊಟ್ಟರೆ ಡಿಆರ್‌ಎಸ್ ನಿಯಮ ಫಲಿತಾಂಶದ ಮೇಲೆ ಮಹತ್ವದ ಪ್ರಭಾವ ಬೀರಲಿದೆ.