Friday, November 22, 2024

‘ಶಿವ’ರಾಮಯ್ಯ ಸರ್ಕಾರಕ್ಕೆ 100ರ ಸಂಭ್ರಮ : 3 ಗ್ಯಾರಂಟಿ ಜಾರಿ.. ಇನ್ನೆರಡು ಬಾಕಿ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಶತಕದ ಸಂಭ್ರಮದಲ್ಲಿದೆ. ಸರ್ಕಾರ ಬಂದ ಆರಂಭದಲ್ಲೇ ವರ್ಗಾವಣೆ ದಂಧೆ, ಭ್ರಷ್ಟಾಚಾರ ಆರೋಪ, ಸ್ವಪಕ್ಷೀಯ ಶಾಸಕರ ವಿರೋಧ ಸೇರಿದಂತೆ ಹಲವು ಏಳು ಬೀಳುಗಳ ಮೂಲಕ 100 ದಿನಗಳನ್ನ ಪೂರೈಸಿದೆ. ಸಂಪೂರ್ಣ ಬಹುಮತ ಇದ್ರೂ, ಸರ್ಕಾರ ಬೀಳಿಸೋ ಕಸರತ್ತು ತೆರೆಮರೆಯಲ್ಲಿ ನಡೆಯುತ್ತಿದೆ.

ಮೇ 20ರಂದು ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ರು. ಆದ್ರೆ, ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಅನೇಕ ಸಂಕಷ್ಟಗಳು ಎದುರಾದವು. ಸಚಿವರ ವರ್ಗಾವಣೆ ದಂಧೆ, ಬಿಬಿಎಂಪಿ ಕಂಟ್ರಾಕ್ಟರ್ಸ್‌ಗಳಿಂದ ಪರ್ಸೆಂಟೇಜ್ ಕೇಳಿದ ಆರೋಪ, ಸಚಿವರ ವಿರುದ್ಧ ಸ್ವಪಕ್ಷೀಯ ಶಾಸಕರೇ ಹೈಕಮಾಂಡ್‌ಗೆ ಬರೆದ ಪತ್ರಗಳೆಲ್ಲವೂ ರಾಜ್ಯ ಸರ್ಕಾರವನ್ನ ಮುಜುಗರಕ್ಕೆ ಸಿಲುಕಿಸಿತು.

CM-DCM ಡ್ಯಾಮೇಜ್ ಕಂಟ್ರೋಲ್‌

ಈ ನಡುವೆ ಪಕ್ಷಕ್ಕೆ ಆಗ್ತಿದ್ದ ಡ್ಯಾಮೇಜ್ ಕಂಟ್ರೋಲ್‌ಗೆ ಸಿಎಂ, ಡಿಸಿಎಂ ಮುಂದಾದ್ರು. ಇನ್ನು ಸರ್ಕಾರಕ್ಕೆ ನೂರು ದಿನಗಳು ಪೂರೈಸಿದ ಹಿನ್ನೆಲೆ, ಸಿಎಂ ಸಿದ್ದರಾಮಯ್ಯ ಸಂತಸವನ್ನ ಹಂಚಿಕೊಂಡಿದ್ದಾರೆ. ಟ್ವೀಟ್ ಮಾಡಿರೋ ಅವರು, ನಮ್ಮ ಮೇಲೆ ಭರವಸೆ ಇಟ್ಟು 135 ಸ್ಥಾನ ಗೆಲ್ಲಿಸಿದ್ದಾರೆ. ಪೂರ್ಣ ಬಹುಮತದ ಸುಭದ್ರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಉಚಿತ ಯೋಜನೆ ಮೂಲಕ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸೋದೇ ನಮ್ಮ ಗುರಿಯಾಗಿದ್ದು ಎಲ್ಲರ ಸಹಕಾರ ಕೋರಿದ್ದಾರೆ.

ಸಾಲು ಸಾಲು ಆರೋಪಗಳ ನಡುವೆ ರಾಜ್ಯ ಕಾಂಗ್ರೆಸ್ ಸರ್ಕಾರದ ಕೈ ಹಿಡಿದಿರೋದೇ 5 ಉಚಿತ ಗ್ಯಾರಂಟಿ ಯೋಜನೆಗಳು. ಇದೇ ಆಗಸ್ಟ್ 30 ರಂದು ಗೃಹಲಕ್ಷ್ಮೀಯೂ ಜಾರಿಯಾಗ್ತಿದ್ದು, ಉಳಿದಂತೆ ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಯೋಜನೆ ಬಾಕಿ ಉಳಿಯಲಿದೆ. ಶೀಘ್ರವೇ ಅದನ್ನೂ ಜಾರಿಗೆ ತರೋದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ರು.

ಲೋಕಸಭೆ ಬಳಿಕ ಸರ್ಕಾರ ಔಟ್?

ಸಿಎಂ ಹಾಗೂ ಡಿಸಿಎಂ ಎರಡು ಬಣಗಳ ನಡುವೆ ಆಗಾಗ ಸಂಘರ್ಷ ಬಹಿರಂಗ ಆಗುತ್ತಿದ್ದು, ಹಿರಿಯ ನಾಯಕರ ವಾಕ್ಸಮರ ಇದಕ್ಕೆ ಸಾಕ್ಷಿಯಾಗಿದೆ. ಇದರ ನಡುವೆ ಸರ್ಕಾರ ಬೀಳಲಿದೆ ಅನ್ನೋ ಚರ್ಚೆಗೂ ಕಾರಣವಾಗಿದ್ದು, ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಬೀಳಲಿದೆ ಅನ್ನೋ ಚರ್ಚೆ ಕೂಡ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಹೀಗಾಗಿಯೇ ಆಪರೇಷನ್ ಹಸ್ತ ಶುರುವಾಗಿದೆ. ಇದು ಎಲ್ಲಿಗೆ ಬಂದು ನಿಲ್ಲಲಿದೆ ಅನ್ನೋ ಕುತೂಹಲ ಮೂಡಿದೆ.

RELATED ARTICLES

Related Articles

TRENDING ARTICLES