ಹಾಸನ : ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಬಳಿಕ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಹಾಸನ ಜಿಲ್ಲೆಯ ಕೋಡಿ ಮಠಕ್ಕೆ ಪತ್ನಿ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಕೃತಿ ನಮ್ಮನ್ನು ಹೇಳಿ ಕೇಳಿ ಮಾಡೋದಿಲ್ಲ. ಈ ಬಾರಿ 9 ಜಿಲ್ಲೆಯಲ್ಲಿ ಮಳೆ ಇಲ್ಲ ಎಂದು ಬೇಸರಿಸಿದ್ದಾರೆ.
ನಮಗೆ ಇದುವರೆಗೆ ಮುಂಗಾರು ಕೊರತೆ ಇದೆ. ಬಹುತೇಕ ಕಡೆ 40ರಷ್ಟು ಮಳೆ ಕೊರತೆ ಇದೆ. ನಮಗೆ ಹೈಡ್ರೋ ಪವರ್ ಉತ್ಪಾದನೆ ಕಡಿಮೆ ಆಗಿದೆ. ಹಾಗಾಗಿ, ಸ್ವಲ್ಪ ದಿನ ಹಾಗೇ ಆಗುತ್ತೆ. ಅದು ಪ್ರಕೃತಿಯಿಂದ ಆಗೊದು. ನಾವೇನು ಅದನ್ನು ಮಾಡಿರೋದಲ್ಲ. ಆದರೂ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಎನ್ನುವ ಮೂಲಕ ಲೋಡ್ ಶೆಡ್ಡಿಂಗ್ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಇದು ಕೂಡ ಅಭಿವೃದ್ಧಿ ಅಲ್ಲವೇ?
ಎಸ್ಸಿಪಿ, ಟಿಎಸ್ಪಿ ಹಣ ಗ್ಯಾರಂಟಿ ಯೋಜನೆಗೆ ಬಳಕೆ ವಿಚಾರವಾಗಿ ಮಾತನಾಡಿ, ಎಲ್ಲಾ ಸಮುದಾಯದ ಜನರು ಕೂಡ ಗ್ಯಾರಂಟಿ ಯೋಜನೆಯ ಫಲ ಪಡೀತಾರೆ. ಎಸ್ಸಿ-ಎಸ್ಟಿಗಳಿಗೂ ಈ ಯೋಜನೆ ಹೋಗುತ್ತೆ. ಹಾಗಾಗಿ, ಆ ಪಾಲನ್ನು ತೆಗೆದು ಖರ್ಚು ಮಾಡಿದ್ದೇವೆ ಇದರಲ್ಲಿ ವಿಶೇಷ ಏನಿದೆ? ತಪ್ಪೇನಿದೆ? ಇದು ಕೂಡ ಅಭಿವೃದ್ಧಿ ಯೋಜನೆಯೇ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
1 ಸಾವಿರ ಕೋಟಿ ತೆಗೆದಿದ್ದೇವೆ
ಅವರನ್ನು ಶಕ್ತಿವಂತರನ್ನಾಗಿ ಮಾಡಲು ಈ ಯೋಜನೆ ಮಾಡಿದ್ದೇವೆ. ಎಸ್ಸಿಪಿ, ಟಿಎಸ್ಪಿ ಉದ್ದೇಶ ಕೂಡ ಇದೇ ಅಲ್ಲವೇ? ವಿಪಕ್ಷಗಳಿಗೆ ಅದು ತಪ್ಪು ಎಂದು ಅನ್ನಿಸುತ್ತೆ. ನಾವು 11 ಸಾವಿರ ಕೋಟಿ ತೆಗೆದಿದ್ದೇವೆ. ಆದರೆ, 11 ಸಾವಿರ ಕೋಟಿಯಲ್ಲಿ ಆ ಸಮುದಾಯಕ್ಕೆ ಏನು ಕೊಡಬೇಕೋ ಅದನ್ನು ಕೊಟ್ಟಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.