ಬೆಂಗಳೂರು : ಪಕ್ಷ ಸಂಘಟನೆ, ಪಕ್ಷದ ಬಲವರ್ಧನೆ. ಮುಂಬರುವ ಲೋಕಸಭಾ ಚುನಾವಣೆ, ತಾ.ಪಂ, ಜಿ.ಪಂ, ಬಿಬಿಎಂಪಿ ಚುನಾವಣೆ ಬಗ್ಗೆ ಇಂದಿನ ನೂಥನ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.
ಪಕ್ಷದ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾನಾಡಿದ ಅವರು, ಆಗಸ್ಟ್ 20 ರಿಂದ ಸೆಪ್ಟೆಂಬರ್ 30ರ ವರೆಗೂ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲಾಗುತ್ತದೆ. ಸೆಪ್ಟೆಂಬರ್ ನಲ್ಲಿ ವರದಿ ನೀಡಿದ ಬಳಿಕ ಪದಾಧಿಕಾರಿಗಳ ಬದಲಾವಣೆ ಆಗಲಿದೆ.
ಇದನ್ನು ಓದಿ: ಜಿ.ಟಿ.ದೇವೆಗೌಡರ ಅಧ್ಯಕ್ಷತೆಯಲ್ಲಿ ಜೆಡಿಎಸ್ ನೂತನ ಕೋರ್ ಕಮಿಟಿ ರಚನೆ
ರಾಜ್ಯ ಸರ್ಕಾರದ ವೈಫಲ್ಯ ಬಗ್ಗೆ ಚರ್ಚೆ ಮಾಡಿದ್ದೇವೆ. ರೈತರು ಕಂಗಾಲಾಗಿದ್ದಾರೆ. ಕೃಷಿ ಸಚಿವರೇ ಹೇಳಿರುವಂತೆ ಮಳೆ ಬಾರದಿದ್ದರೆ, ಬಿತ್ತಿರೋ ಬೆಳೆ ಒಣಗುತ್ತದೆ. ತಮಿಳುನಾಡಿಗೆ ಕಾವೇರಿ ನದಿ ನೀರು ಬಿಟ್ಟಿರುವುದರ ಬಗ್ಗೆಯೂ ಚರ್ಚೆಯಾಗಿದೆ. ಕೂಡಲೇ ಸರ್ವ ಪಕ್ಷದ ಸಭೆ ಕರೆಯಬೇಕು ಎಂದು ಅವರು ಆಗ್ರಹಿಸಿದರು.
ಜೆಡಿಎಸ್ ಪಕ್ಷಕ್ಕೆ ಜನ ಮತ ಕೊಟ್ಟಿಲ್ಲ. ಆದರೂ ಪಕ್ಷ ರೈತರ ಕೈಬಿಡಲ್ಲ ಅಂತ ಸಂದೇಶ ಕೊಡಲಿದ್ದೇವೆ. ನಾವೆಲ್ಲಾ ಒಗ್ಗಟ್ಟಾಗಿ ಪಕ್ಷ ಬಲಪಡಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಮಾಜಿ ಶಾಸಕ ಕೃಷ್ಣಾರೆಡ್ಡಿ, ದೊಡ್ಡಪ್ಪಗೌಡ ಎಸ್.ಪಾಟೀಲ್ ನರಿಬೋಳ ಉಪಸ್ಥಿತರಿದ್ದರು.