ಉತ್ತರ ಪ್ರದೇಶ : ಕಾರ್ಯಕ್ರಮವೊಂದರ ಶಂಕುಸ್ಥಾಪನೆಯಲ್ಲಿ ‘ಭಾರತ್ ಮಾತಾ ಕಿ ಜೈ’ ಎನ್ನುವ ವಿಚಾರವಾಗಿ ಜನಪ್ರತಿನಿಧಿಗಳಿಬ್ಬರ ನಡುವೆ ವಾಗ್ವಾದವಾಗಿದೆ.
ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಮ್ರೋಹ ಲೋಕಸಭೆ ಕ್ಷೇತ್ರದ ಬಿಎಸ್ಪಿ ಸಂಸದ ಕುನ್ವರ್ ಡ್ಯಾನಿಶ್ ಅಲಿ ಹಾಗೂ ಬಿಜೆಪಿಯಿಂದ ಆಯ್ಕೆಯಾಗಿರುವ ವಿಧಾನಪರಿಷತ್ ಸದಸ್ಯ ಹರಿಸಿಂಗ್ ದಿಲ್ಲೋನ್ ನಡುವೆ ಜಟಾಪಟಿ ನಡೆದಿದೆ. ಈ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ಇಂದು ಅಮೃತ್ ಭಾರತ ನಿಲ್ದಾಣದ ಯೋಜನೆಯ ಶಂಕುಸ್ಥಾಪನೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಏಕಕಾಲದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮವನ್ನೂ ನೆರವೇರಿಸಿದ್ದಾರೆ.
ಇಬ್ಬರೂ ನಾಯಕರ ನಡುವಿನ ವಾಗ್ವಾದ
ಶಂಕುಸ್ಥಾಪನೆ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹರಿಸಿಂಗ್ ದಿಲ್ಲೋನ್, ಮೊದಲಿಗೆ ‘ಭಾರತ್ ಮಾತಾ ಕಿ ಜೈ’ ಎಂದು ಹೇಳುವ ಮೂಲಕ ತಮ್ಮ ಭಾಷಣವನ್ನೂ ಆರಂಭಿಸಿದ್ದಾರೆ. ಈ ವೇಳೆ ಇದಕ್ಕೆ ಆಕ್ಷೇಪಿಸಿದ ಸಂಸದ ಕುನ್ವರ್ ಡ್ಯಾನಿಶ್ ಅಲಿ ಸರ್ಕಾರಿ ಕಾರ್ಯಕ್ರಮವನ್ನೂ ನಿಮ್ಮ ಪಕ್ಷದ ವೇದಿಕೆಯನ್ನಾಗಿ ಬಳಸಿಕೊಳ್ಳಬೇಡಿ ಎಂದಿದ್ದಾರೆ.
ಈ ವಿಚಾರವಾಗಿ ಇಬ್ಬರೂ ನಾಯಕರ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.