ಬೆಂಗಳೂರು : ಮುಸಲ್ಮಾನರ ಮತಕ್ಕೆ ಅಂಜಿ, ಇವ್ರು ಇಷ್ಟು ಕೆಟ್ಟ ಕೆಲಸವನ್ನು ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಗೋವಿಂದ ವಿ. ಕಾರಜೋಳ ಗುಡುಗಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಮತಕ್ಕಾಗಿ ಈ ರೀತಿ ರಾಜಕಾರಣ ಮಾಡೋದು ಸರಿಯಲ್ಲ ಎಂದು ಛೇಡಿಸಿದರು.
ಅಭಿವೃದ್ಧಿ ಮಾಡಲ್ಲ ಅಂದರೆ ಇವ್ರು ಅಧಿಕಾರದಲ್ಲಿ ಮುಂದುವರಿಯೋಕೆ ನೈತಿಕತೆ ಇದೆಯಾ? ಉಚಿತ ಗ್ಯಾರಂಟಿಗಳಿಗೆ ಹಣ ಬೇಕು, ಅಭಿವೃದ್ಧಿಗೆ ಹಣ ಇಲ್ಲ ಅಂತ ಹೇಳ್ತಾರೆ. ಮಾನ ಮರ್ಯಾದೆ ಇಲ್ಲದೇ ಇರೋರು ಈ ರೀತಿ ಹೇಳ್ತಾರೆ. ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಆಕ್ರೋಶಗೊಂಡರು.
ನಿಜವಾಗಿಯೂ ನಾಚಿಕೆಗೇಡಿನ ಸಂಗತಿ
ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು 19ರಂದು ಒಂದು ಪತ್ರ ಬರೆಯುತ್ತಾರೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣ ಸಂಬಂಧ ಅಮಾಯಕರ ಕೇಸ್ ವಾಪಸ್ ಪಡೆಯುವ ಕುರಿತು. ಇವ್ರು ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿದ್ರು. ಅಂತಹವರು ಅಮಾಯಕರು ಅಂತ ಗೃಹ ಸಚಿವರು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇದು ನಿಜವಾಗಿಯೂ ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಇದು ಜಿಹಾದಿಗಳ ಸರ್ಕಾರ ಎಂಬುದು ಸ್ಪಷ್ಟವಾಗ್ತಿದೆ : ಅಶ್ವತ್ಥನಾರಾಯಣ ಕಿಡಿ
ಸರ್ಕಾರದಿಂದ ದಲಿತರಿಗೆ ಅವಮಾನ
ವೋಟು ಕೊಟ್ಟ ಜನರಿಗೂ ಇವರು ಅಪಮಾನ ಮಾಡಿದ್ದಾರೆ. ಇಂತಹವರನ್ನು ಸುಳ್ಳು ಮೊಕದ್ದಮೆ ಅಂತ ಪ್ರಕರಣ ವಾಪಸ್ ಪಡೆಯುವ ಬಗ್ಗೆ ಗೃಹ ಸಚಿವರು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇದು ಕಾಂಗ್ರೆಸ್ ನವರ ಆಡಳಿತ. ಸಿದ್ದರಾಮಯ್ಯ ಸರ್ಕಾರದಿಂದ ದಲಿತರಿಗೆ ಅವಮಾನ ಆಗಿದೆ. ಈ ಮೊಕದ್ದಮೆ ವಾಪಸ್ ತಗೊಂಡ್ರೆ ಅಲ್ಲೋಲ ಕಲ್ಲೋಲ ಸೃಷ್ಟಿ ಯಾಗುತ್ತದೆ. ನಾವು ಹೋರಾಟವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದರು.
ಶಾಸಕ ತನ್ವೀರ್ ಸೇಠ್ ಗೆ ಎಸ್ಡಿಪಿಐನವರು ಚೂರಿ ಹಾಕಿ ಸಾಯಿಸೋಕೆ ಹೊರಟಿದ್ರು. ಆದರೆ, ಅವರನ್ನು ನೋಡೋಕೆ ಯಾರು ಹೋಗಿರಲಿಲ್ಲ. ಆಗ ನಮ್ಮ ವಿ. ಸೋಮಣ್ಣ ಅವರ ಮನೆಗೆ ಹೋಗಿದ್ರು ಎಂದು ಕುಟುಕಿದರು.