ಶಿವಮೊಗ್ಗ : ಸಮಗ್ರ ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಜುಲೈ 27ರಂದು ಬೃಹತ್ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.
ಸಮಾಜಕ್ಕೆ ಅಗತ್ಯ ಇರುವುದನ್ನು ಮಠ ಕೊಡಬೇಕು. ಆ ನಿಟ್ಟಿನಲ್ಲಿ ಮಠಗಳು ಕೆಲಸ ಮಾಡ್ತಾ ಬಂದಿದೆ. ವೀರಶೈವ ಲಿಂಗಾಯತ ಸಮಾಜದ ಒಗ್ಗಟ್ಟು ಅತ್ಯಗತ್ಯವಾಗಿದೆ. ಲಿಂಗಾಯತ ಸಮಾಜ ರಾಜ್ಯದಲ್ಲಿ ದೊಡ್ಡ ಸಮಾಜ. ಆದರೆ, ಇತರೆ ರಾಜ್ಯಗಳಲ್ಲಿ ಅಲ್ಪಸಂಖ್ಯಾತರು. ಸಮಗ್ರ ವೀರಶೈವ ಲಿಂಗಾಯತ ಸಮುದಾಯಕ್ಕೆ ಸವಲತ್ತುಗಳು ಸಿಗಬೇಕಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : 78 ಲಕ್ಷ ಬಿಪಿಎಲ್ ಫಲಾನುಭವಿಗಳಿಗೆ 456 ಕೋಟಿ ಜಮಾ, 12 ಜಿಲ್ಲೆಗೆ ಬಾಕಿ
ಒಬಿಸಿ ಪಟ್ಟಿಗೆ ಸೇರಿಸಬೇಕು
ಕೇಂದ್ರದಲ್ಲಿ ಕೆಲವು ವರ್ಗಕ್ಕೆ ಮಾತ್ರ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ, ಇನ್ನುಳಿದ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ. ಹೀಗಾಗಿ, ಸಮಗ್ರ ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು. ಈ ಕುರಿತು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
5 ಸಾವಿರ ಜನರು ಭಾಗಿ
ಜುಲೈ 27ರಂದು ಶಿವಮೊಗ್ಗದ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಬೃಹತ್ ಸಭೆ ನಡೆಯಲಿದೆ. ನಾಡಿನ ಸಮಸ್ತ ವೀರಶೈವ ಲಿಂಗಾಯತ ಮಠಾಧೀಶರು ಭಾಗಿಯಾಗಲಿದ್ದಾರೆ. ಸಮಾಜದ ಮುಖಂಡರು, ಜನಪ್ರತಿನಿಧಿಗಳು ಉಪಸ್ಥಿತರಿರುವರು. ಸುಮಾರು 5 ಸಾವಿರ ಜನರು ಭಾಗಿಯಾಗಲಿದ್ದಾರೆ ಎಂದು ಮಲ್ಲಿಕಾರ್ಜುನ ಶ್ರೀಗಳು ಹೇಳಿದ್ದಾರೆ.