ಬೆಂಗಳೂರು : ಅಕ್ಕಿ ಸಿಗುವ ವರೆಗೂ ಐದು ಕಿಲೋ ಅಕ್ಕಿ ಜೊತೆಗೆ ಐದು ಕಿಲೋ ಅಕ್ಕಿಗೆ ಹಣ ಕೊಡಲು ತೀರ್ಮಾನ ಮಾಡಿದ್ದೇವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ರಾಜ್ಯ ಬಿಜೆಪಿ ಕುಟುಕಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, 10 ಕಿಲೋ ಅಕ್ಕಿಯ ಸಂಪೂರ್ಣ ದುಡ್ಡನ್ನು ಜನರ ಖಾತೆಗೆ ಹಾಕಿ ಎಂದು ಆಗ್ರಹಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಕೊನೆಗೂ 5 ಕಿಲೋ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿದೆ ಅಂತ ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು. ನಿಮ್ಮ ಎಟಿಎಂ (#ATMSarkara) ಸರ್ಕಾರಕ್ಕೆ ಮರ್ಯಾದೆ, ವಚನ ಬದ್ಧತೆ ಇದ್ಯಾ? ಇರುವುದೇ ಆದರೆ, ನೀವು ಕೊಡಬೇಕಿರುವುದು ಕೇವಲ 5 ಕಿಲೋನ ಅಕ್ಕಿಯ ಹಣವನ್ನಲ್ಲ ಎಂದು ಛೇಡಿಸಿದೆ.
10 ಕೆಜಿ ಅಂತ ಎದೆ ಬಡಿದುಕೊಂಡ್ರಿ
10 ಕಿಲೋ ಅಕ್ಕಿಯನ್ನು ರಾಜ್ಯ ಸರ್ಕಾರ ಪೂರೈಸಲಿದೆ ಅಂತ ಎದೆ ಬಡಿದುಕೊಂಡಂತೆ, 10 ಕಿಲೋನ ಸಂಪೂರ್ಣ ಹಣವನ್ನು ಜನರ ಖಾತೆಗಳಿಗೆ ವರ್ಗಾಯಿಸಿ. ಕೊಟ್ಟ ಮಾತು ತಪ್ಪಿ ನಡೆದರೆ ಕನ್ನಡಿಗರು ಮೆಚ್ಚಲಾರರು ಎಂಬ ಎಚ್ಚರಿಕೆಯ ಸಂದೇಶ ರವಾನಿಸಿದೆ.
ನಿಮ್ಮ ಕೆಲಸ ನಿದ್ದೆ ಮಾಡುವುದೇ?
ಸಿದ್ದರಾಮಯ್ಯನವರೇ, ಆಹಾರ ಧಾನ್ಯ ಬೆಲೆ ಹೆಚ್ಚಳ ತಡೆ ಕೇಂದ್ರದ ಕೆಲಸ. ಅಕ್ಕಿ ಕೊಡೋದು ಕೇಂದ್ರದ ಕೆಲಸ. ನಿಮ್ಮ ಬಿಟ್ಟಿ ಭಾಗ್ಯಗಳಿಗೆ ಅನುದಾನ ಕೊಡೋದು ಕೇಂದ್ರದ ಕೆಲಸ. ವಿದ್ಯುತ್ ದರ, ಹಾಲಿನ ದರ ಹೆಚ್ಚಳವಾದ್ರೆ ಹಿಂದಿನ ಸರ್ಕಾರದ ಕೆಲಸ. ಎಲ್ಲದಕ್ಕೂ ಬೇರೆಯವರೇ ಕಾರಣ ಆದರೆ, ನಿಮ್ಮ ಕೆಲಸ ಏನು? ನಿದ್ದೆ ಮಾಡುವುದೇ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕುಟುಕಿದ್ದಾರೆ.