ಬೆಂಗಳೂರು : ಅಕ್ಕಿ ವಿತರಣೆಗೆ ಸಂಬಂಧಿಸಿ ಕೇಂದ್ರಕ್ಕೆ ಕರ್ನಾಟಕವೊಂದೇ ಮುಖ್ಯವಲ್ಲ. ಇತರೆ ರಾಜ್ಯಗಳಿಗೆ ಅಕ್ಕಿ ಪೂರೈಸುವ ಜವಾಬ್ದಾರಿ ಇದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಕಾಂಗ್ರೆಸ್ ಟಾಂಗ್ ಕೊಟ್ಟಿದೆ.
ಈ ಕುರಿತು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ಕಿಡಿಕಾರಿದೆ. ಅಕ್ಕಿ ಪೂರೈಕೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ್ದ ಕಟೀಲ್, ಕಾಂಗ್ರೆಸ್ ಸರ್ಕಾರ ಬಡ ಕುಟುಂಬಗಳಿಗೆ 10 ಕಿಲೋ ಉಚಿತ ಅಕ್ಕಿ ನೀಡುವ ಮುನ್ನ ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಿಲ್ಲ. ಹೀಗಾಗಿ, ಅಕ್ಕಿ ಕೊಡುವ ಯೋಜನೆಗೆ ಬೇಕಾದ ಅಕ್ಕಿಯನ್ನು ತಾನೇ ಹೊಂದಿಸಿಕೊಳ್ಳಬೇಕು ಎಂದು ಹೇಳಿದ್ದರು.
ಕಟೀಲ್ ಹೇಳಿಕೆ ಖಂಡಿಸಿರುವ ಕಾಂಗ್ರೆಸ್, ಇದು ಕರ್ನಾಟಕದ ಹಿತ ಕಾಯಲು ಕನ್ನಡಿಗರಿಂದ ಆಯ್ಕೆಯಾದ ಸಂಸದರ ಮಾತು ಎಂದು ಕುಟುಕಿದೆ. ಕಟೀಲ್ ಅವರೇ, ಚುನಾವಣೆ ಬಂದಾಗ ಮಾತ್ರ ಮೋದಿಗೆ ಕರ್ನಾಟಕವೇ ಮುಖ್ಯವಾಗಿರುತ್ತದೆಯೇ? ಎಂದು ಛೇಡಿಸಿದೆ.
ಇದನ್ನೂ ಓದಿ : ಲೋಕಸಭಾ ಚುನಾವಣೆ ಗೆಲ್ಲಲು ಶಾಸಕರಿಗೆ ಟಾಸ್ಕ್ ಕೊಟ್ಟ ಕಟೀಲ್
ನೆರೆ ಪರಿಹಾರ ಕೊಡಲಿಲ್ಲವೇ?
ಚುನಾವಣೆಗಾಗಿ ಮೂರು, ಮೂರು ದಿನಕ್ಕೊಮ್ಮೆ ಓಡೋಡಿ ಬಂದು ಗಲ್ಲಿ ಗಲ್ಲಿಯಲ್ಲಿ ಕೈ ಬೀಸಿದ ಮೋದಿಗೆ ಅಂದು ಕರ್ನಾಟಕ ಮುಖ್ಯವಾಗಿತ್ತೇ? ಕರ್ನಾಟಕ ಮುಖ್ಯವಾಗಿರದಿದ್ದಕ್ಕೆ ನೆರೆ ಪರಿಹಾರ ಕೊಡಲಿಲ್ಲವೇ? ಬರ ಪರಿಹಾರ ಕೊಡಲಿಲ್ಲವೇ? ಕರ್ನಾಟಕದಲ್ಲಿನ ಯೋಜನೆಗಳನ್ನು ಕಿತ್ತುಕೊಂಡಿದ್ದೇ ಎಂದು ಕುಟುಕಿದೆ.
ಸಂಸದರಾಗಿ ತನ್ನ ಜವಾಬ್ದಾರಿ ಮರೆತು ಇಂತಹ ಹೇಳಿಕೆ ನೀಡುತ್ತಿರುವ ಬಿಜೆಪಿಯವರನ್ನು ಕರ್ನಾಟಕದ ಜನತೆ ಲೋಕಸಭೆಯ ಚುನಾವಣೆಯಲೂ ಫ್ರೀಯಾಗಿ ಟಿಕೆಟ್ ಕೊಡಿಸಿ ಮನೆಗೆ ಕಳಿಸುವುದು ನಿಶ್ಚಿತ ಎಂದು ಟಕ್ಕರ್ ನೀಡಿದೆ.