ಮೈಸೂರು : ಪಿಎಸ್ಐ ಹಗರಣದಲ್ಲಿ ನನ್ನ ಹೆಸರೂ ಕೇಳಿಬಂದಿದೆ. ಪಾರದರ್ಶಕ ತನಿಖೆ ಮಾಡಲಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಸವಾಲ್ ಹಾಕಿದ್ದಾರೆ.
ಮೈಸೂರಿನಲ್ಲಿ ಪಿಎಸ್ಐ ಹಗರಣ ಮರು ತನಿಖೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕೆಲವು ಕಾಂಗ್ರೆಸ್ ಮುಖಂಡರು ಪಿಎಸ್ಐ ಹಗರಣದಲ್ಲಿ ನನ್ನ ಹೆಸರನ್ನು ತೇಲಿ ಬಿಟ್ಟಿದ್ದಾರೆ. ಅವರದ್ದೇ ಸರ್ಕಾರ ಅಧಿಕಾರಕ್ಕೆ ಬಂದಿದೆ. ಯಾವುದೇ ವಿಚಾರವಾಗಿ ತನಿಖೆ ಮಾಡಲಿ ಎಂದು ತಿಳಿಸಿದ್ದಾರೆ.
ಪಾರದರ್ಶಕವಾಗಿ ತನಿಖೆ ಮಾಡಬೇಕು. ವಿರೋಧ ಪಕ್ಷವನ್ನು ಬಗ್ಗು ಬಡಿಯಬೇಕೆಂದು ಸೇಡಿನ ಮನೋಭಾವನೆಯಿಂದ ಮಾಡುವುದು ಸರಿಯಲ್ಲ. ಪಾರದರ್ಶಕವಾಗಿ ತನಿಖೆ ಮಾಡಿದರೆ ಸ್ವಾಗತ. ಮುಂದಿನ ಲೋಕಸಭಾ ಚುನಾವಣಾಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ದೃಷ್ಟಿಯಿಂದ ಕೆಲಸ ಮಾಡುತ್ತೇವೆ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಇದನ್ನೂ ಓದಿ : ‘ಹಿಟ್ಲರ್ ಸರ್ಕಾರ’ ಅನ್ನೋದಕ್ಕೆ ಎಂ.ಬಿ ಪಾಟೀಲ್ ಹೇಳಿಕೆಯೇ ಸಾಕ್ಷಿ : ತೇಜಸ್ವಿ ಸೂರ್ಯ
ಗ್ಯಾರಂಟಿಗೆ ಸಾಕಷ್ಟು ಷರತ್ತು ಹಾಕ್ತಿದ್ದಾರೆ
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಜಾರಿ ವಿಚಾರ ಮಾತನಾಡಿ, ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಚುನಾವಣಾ ಸಂಧರ್ಭದಲ್ಲಿ ಏನೇನು ಆಶ್ವಾಸನೆ ಕೊಟ್ಟಿದ್ರು, ಜನರು ಸಾಕಷ್ಟು ನೀರಿಕ್ಷೆಯಲ್ಲಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಈಗಾಗಲೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಷರತ್ತು ವಿಧಿಸುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಗ್ಯಾರಂಟಿ ಜಾರಿಗೆ ಸಾಲವನ್ನು ಮಾಡ್ತಾರಾ?
ಗ್ಯಾರಂಟಿ ಯೋಜನೆಗಳಿಗೆ ಎಷ್ಟು ಹಣಬೇಕಾಗುತ್ತದೆ? ಅದಕ್ಕೆ ಹಣವನ್ನು ಹೇಗೆ ಹೊಂದಿಕೊಳ್ಳುತ್ತಾರೆ? ಹೊಸ ತೆರಿಗೆ ಹಾಕುತ್ತಾರಾ?ಅಥವಾ ಸಾಲವನ್ನು ಮಾಡುತ್ತಾರಾ? ಇದೆಲ್ಲವನ್ನೂ ಸಹ ಬಿಜೆಪಿ ಗಮನಿಸುತ್ತಿದೆ. ಕಾಂಗ್ರೆಸ್ ಕೊಟ್ಟ ಭರವಸೆ ಯಾಥವತ್ ಆಗಿ ಜನರಿಗೆ ತಲುಪಬೇಕು, ಇದಕ್ಕೆ ಯಾವುದೇ ಕಂಡಿಷನ್ ಹಾಕಬಾರದು ಎಂದು ವಿಜಯೇಂದ್ರ ಛೇಡಿಸಿದ್ದಾರೆ.
ಜವಬ್ದಾರಿಯುತ ಪ್ರತಿಪಕ್ಷವಾಗಿ ಹೋರಾಟ
ಈಗಾಗಲೇ ವಿದ್ಯುತ್ ಬಿಲ್(ದರ) ಹೆಚ್ಚಳ ಮಾಡಿದ್ದಾರೆ. ಗ್ಯಾರಂಟಿ ಜಾರಿ ಮಾಡಲು ಹೆಚ್ಚು ಹೆಚ್ಚು ತೆರಿಗೆ ವಿಧಿಸುತ್ತಿದ್ದಾರೆ. ಗ್ಯಾರಂಟಿ ಕಾರ್ಡ್ ಒಂದು ಕಡೆ, ಮತ್ತೊಂದು ಕಡೆ ಗ್ರಾಹಕರಿಗೆ ಪೆಟ್ಟು ಕೊಡುತ್ತಿದ್ದಾರೆ. ಬಿಜೆಪಿ ಕಾದು ನೋಡುತ್ತಿದೆ. ಜವಬ್ದಾರಿಯುತ ಪ್ರತಿಪಕ್ಷವಾಗಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.