ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಚಂಡ ಗೆಲುವು ಸಾಧಿಸಿದೆ. ಈ ಗೆಲುವಿನ ಹಿಂದಿನ ರೂವಾರಿ ಕನ್ನಡಿಗ ಸುನೀಲ್ ಕನುಗೋಲು.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಅಣಿಯಾಗಿದೆ. ಆ ಮೂಲಕ ಆಡಳಿತರೂಢ ಬಿಜೆಪಿಗೆ ದಕ್ಷಿಣ ಭಾರತದ ಬಾಗಿಲನ್ನು ಮುಚ್ಚಿದೆ. ಈ ಯಶಸ್ಸಿನ ಹಿಂದೆ ಚುನಾವಣಾ ಚಾಣಕ್ಯ ಸುನೀಲ್ ಅವರ ಕರಾಮತ್ತು ಅಡಗಿದೆ.
ಕಾಂಗ್ರೆಸ್ ಪಕ್ಷದ ಈ ಅಭೂತಪೂರ ಗೆಲುವಿನ ಹಿಂದೆ ಚುನಾವಣಾ ನೀತಿ ತಜ್ಞರಾಗಿರುವ ಸುನೀಲ್ ಕನುಗೋಲು ಅವರಿದ್ದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇವರು ರೂಪಿಸಿದ್ದ ಕಾರ್ಯತಂತ್ರಗಳು ಫಲ ನೀಡಿವೆ.
ಇದನ್ನೂ ಓದಿ : ಗದ್ದುಗೆ ‘ಗುದ್ದಾಟದಲ್ಲಿ ಗೆದ್ದ ಸಿದ್ದು’, ಎರಡನೇ ಬಾರಿಗೆ ಸಿದ್ದುನೇ ಸಿಎಂ..!
ಸುನೀಲ್ ಗಣಿನಾಡು ಬಳ್ಳಾರಿಯವರು
ಸುನೀಲ್ ಕನುಗೋಲು ಅವರು ಮೂಲತಃ ಕರ್ನಾಟಕದ ಬಳ್ಳಾರಿಯವರು. ಹಿರಿಯ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಅವರ ತಂಡದಲ್ಲಿ ಈ ಹಿಂದೆ ಕೆಲಸ ಮಾಡಿ ಅನುಭವ ಪಡೆದಿದ್ದಾರೆ. ಇವರು ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ, ಪ್ರಚಾರಕ್ಕೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಿದ್ದರು.
ರಾಗಾ ಜೊತೆ ಜೋಡೋದಲ್ಲಿ ಕೆಲಸ
ಸುನೀಲ್ ಕನುಗೋಲು ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆಯಲ್ಲಿ ಸಕ್ರೀಯರಾಗಿದ್ದರು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿಯೂ ಕನುಗೋಲು ಕೆಲಸ ಮಾಡಿ ಸಕ್ಸಸ್ ಆಗಿದ್ದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ಪರವಾಗಿಯೂ ಕೆಲಸ ಮಾಡಿರುವ ಇವರು 2017ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.