ಚಿಕ್ಕಮಗಳೂರು : ‘ಬ್ಲಡ್ ಇಸ್ ಥಿಕ್ಕರ್ ದೆನ್ ವಾಟರ್’. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಎಸ್.ಎಲ್.ಭೋಜೇಗೌಡ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಿ.ಟಿ ರವಿ ಬುದ್ಧಿವಂತರಿದ್ದಾರೆ ಎಂದು ಹಾಡಿ ಹೊಗಳಿದ್ದಾರೆ.
ಸಿ.ಟಿ ರವಿ ಬಹಳ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಆಗಿದ್ದರು. ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಯೋಗವೂ ಲಭಿಸಿತ್ತು. ಟೀಕೆಗಳು ತಪ್ಪಲ್ಲ. ಆದರೆ, ಅದಕ್ಕೊಂದು ಇತಿಮಿತಿ ಇರುತ್ತಿತ್ತು. ರಾಜಕೀಯ ಅಸ್ತ್ರದ ಟೀಕೆ ಸರಿ, ವೈಯಕ್ತಿಕ ಟೀಕೆ ಸರಿಯಲ್ಲ ಎಂದು ಮೆದುವಾಗಿಯೇ ಕುಟುಕಿದ್ದಾರೆ.
ಕ್ಷಣಿಕ ಸುಖಕ್ಕೆ ಟೀಕೆ ಸರಿಯಲ್ಲ
ಸಿ.ಟಿ ರವಿ ಸದನದ ಒಳಗೆ ಹಾಗೂ ಹೊರಗೆ ಎರಡೂ ಕಡೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಟೀಕೆ ಮಾಡುವಾಗ ವ್ಯಕ್ತಿತ್ವ, ರಾಜಕೀಯ ಮುತ್ಸದ್ದಿತನವನ್ನು ಯೋಚನೆ ಮಾಡಬೇಕು. ಯಾರನ್ನೋ ಮೆಚ್ಚಿಸಲು, ಕ್ಷಣಿಕ ಸುಖಕ್ಕೆ, ಕಾರ್ಯಕರ್ತರ ಮೆಚ್ಚಿಸಲು ವೈಯಕ್ತಿಕ ಟೀಕೆ ಸರಿಯಲ್ಲ ಎಂದು ಟಕ್ಕರ್ ಕೊಟ್ಟಿದ್ದಾರೆ.
ಇದನ್ನೂ ಓದಿ : ನನ್ನ ಕ್ಷೇತ್ರ ಚಿನ್ನದಂತೆ ಇತ್ತು, ಹೈಕಮಾಂಡ್ ಹೇಳಿತೆಂದು ಹೋದೆ : ಸೋಮಣ್ಣ ಭಾವುಕ
ಕುಲದ ಕುತ್ತಿಗೆ ಉದ್ದ ಸರ್..!
ದೇವೇಗೌಡರಿಗೆ ಸಾಬರಾಗಿ ಹುಟ್ಲಿ ಅನ್ನೋದು, ಸಿದ್ದರಾಮಯ್ಯಗೆ ಸಿದ್ರಾಮುಲ್ಲಾ ಖಾನ್ ಅನ್ನೋದು. ಸಿ.ಟಿ ರವಿ ಯಾರನ್ನು ಬಿಟ್ಟಿದ್ದಾರೆ? ಯಾರನ್ನೂ ಬಿಟ್ಟಿಲ್ಲ? ಟೀಕೆ ಮಾಡುವಾಗಲು ರಾಜಕೀಯ ಸ್ಟ್ಯಾಂಡರ್ಡ್ ನಲ್ಲಿ ಟೀಕೆ ಮಾಡಬೇಕು. ಕುಲದ ಕುತ್ತಿಗೆ ಉದ್ದ ಸರ್… ಅಷ್ಟು ಸುಲಭ ಇಲ್ಲ. ‘ಬ್ಲಡ್ ಇಸ್ ಥಿಕ್ಕರ್ ದೆನ್ ವಾಟರ್’ ಎಂದು ಛೇಡಿಸಿದ್ದಾರೆ.
ಕುಲದ ಬಗ್ಗೆ ಮಾತನಾಡುವಾಗ ಜನ ಆತನ ಹಮ್ಮಿನ ಬಗ್ಗೆ ಯೋಚಿಸುತ್ತಾರೆ. ಸಿ.ಟಿ ರವಿ ಸೋಲಿಗೆ ಅವರ ನಾಲಿಗೆಯೇ ಕಾರಣ. ದುರಾಡಳಿತ, ದುರಾಂಕಾರ, ನಾಲಿಗೆ ಎಲ್ಲವೂ ಸೇರಿ ಕೂಡಿ ಸೋಲಿಸಿವೆ ಎಂದು ಎಸ್.ಎಲ್.ಭೋಜೇಗೌಡ ವಿಶ್ಲೇಷಣೆ ಮಾಡಿದ್ದಾರೆ.