ಬೆಂಗಳೂರು : ಈ ಬಾರಿಯ ಚುನಾವಣೆಯಲ್ಲಿ 121 ಸ್ಥಾನಗಳನ್ನು ಗೆದ್ದು ಸ್ವಯಂ ಬಲದ ಮೇಲೆ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಪ್ರೆಸಿಡೆಂಟ್ ಹೋಟೆಲಿನಲ್ಲಿ ನಿನ್ನೆ ತಡರಾತ್ರಿ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಪಕ್ಷದ ನಾಯಕರಿಗೆ ಹಲ್ವಾ ಹಂಚಿದ್ದಾರೆ.
ಅಷ್ಟೇ ಅಲ್ಲದೆ ಪಕ್ಷದ ಉಸ್ತುವಾರಿ ವಹಿಸಿಕೊಂಡಿರುವ ಅರುಣ್ ಸಿಂಗ್ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಸಭೆಯಿಂದಲೇ ಫೋನ್ ಮಾಡಿ, ನಾಳೆ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ.
ಪಕ್ಷ ಸರ್ಕಾರ ರಚಿಸುವುದು ನಿಶ್ಚಿತ. ಅದರ ರೂಪು ರೇಷೆ ನಿರ್ಧರಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾನುವಾರ ರಾಜ್ಯಕ್ಕೆ ಬರಲಿದ್ದಾರೆ ಎಂದೂ ಈ ಸಭೆಯಲ್ಲಿ ಯಡಿಯೂರಪ್ಪ ವಿವರಿಸಿದ್ದಾರೆ. ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಹಲ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ನಮಗೆ 121 ಸೀಟು ಬರಲಿದೆ
ನಾನು ಇವತ್ತು ಸಂಜೆಯ ವೇಳೆಗೆ ಪಕ್ಕಾ ಮಾಹಿತಿ ತರಿಸಿದ್ದೇನೆ. ನಮಗೆ 121 ಸೀಟು ಬರಲಿದೆ ಎಂದು ಯಡಿಯೂರಪ್ಪ ಸಭೆಗೆ ವಿವರಿಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ನಾವು 116-117 ಸ್ಥಾನಗಳಲ್ಲಿ ಗೆಲ್ಲುವ ಮಾಹಿತಿ ತಮಗೆ ಬಂದಿರುವುದಾಗಿ ವಿವರಿಸಿದರು.
ತಮಗೆ 141 ಸೀಟು ಬರುತ್ತದೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ತಮಗೆ 141 ಸೀಟು ಬರುತ್ತದೆ ಅಂತ ಹೇಳುತ್ತಿದ್ದು, ಜೆಡಿಎಸ್ ಪಕ್ಷದ ಎಚ್.ಡಿ.ಕುಮಾರಸ್ವಾಮಿ ಅತಂತ್ರ ಸರ್ಕಾರದ ಕನಸು ಕಾಣುತ್ತಿದ್ದಾರೆ.
ಈ ನಡುವೆ ಇಂದು ಸಂಜೆ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸ್ವಯಂ ಬಲದ ಮೇಲೆ ಅಧಿಕಾರ ಪಡೆಯುವುದು ನಿಶ್ಚಿತ ಅಂತ ಯಡಿಯೂರಪ್ಪ ಹಲ್ವಾ ಹಂಚಿ ಸಂಭ್ರಮಾಚರಣೆ ಮಾಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.