ಬೆಂಗಳೂರು : ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಚುನಾವಣೆಗಳು ನಡೆದಾಗಲೆಲ್ಲಾ ಅರಮನೆ ನಗರಿ ಮೈಸೂರಿನಲ್ಲಿರುವ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ (ಮೈಲ್ಯಾಕ್) ನೌಕರರಿಗೆ ಬಿಡುವಿಲ್ಲದ ಕೆಲಸ.
ಹೌದು, ಮತದಾರರ ‘ಕೈ’ ಬೆರಳಿಗೆ ಹಚ್ಚುವ ಶಾಯಿ ತಯಾರಾಗುವುದು ಮೈಸೂರಿನ ಇದೇ ಕಾರ್ಖಾನೆಯಲ್ಲಿ. ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಗೆ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ 1937 ರಲ್ಲಿ ಈ ಕಾರ್ಖಾನೆ ಪ್ರಾರಂಭಿಸಿದ್ದರು.
ಚುನಾವಣೆಯಲ್ಲಿ ಅಕ್ರಮ ತಡೆಯುವ ಸಲುವಾಗಿ 1962ರ ನಂತರ ದೇಶದಲ್ಲಿ ಕೈ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಚ್ಚುವುದನ್ನು ಜಾರಿಗೆ ತರಲಾಯಿತು. ಅಲ್ಲದೆ, ಶಾಯಿಯನ್ನು ತಯಾರಿಸಿ ಪೂರೈಸುವ ಜವಬ್ದಾರಿಯನ್ನು ಮೈಸೂರಿನ ಮೈಲ್ಯಾಕ್‌ಗೆ ವಹಿಸಲಾಯಿತು. ಅಲ್ಲಿಂದ ಇಲ್ಲಿವರೆಗೆ ಎಲ್ಲಿಯೇ ಚುನಾವಣೆಗಳು ನಡೆಯಲಿ ಮೈಲ್ಯಾಕ್ ನಿಂದಲೇ ಶಾಯಿ ಪೂರೈಕೆಯಾಗುತ್ತದೆ.
ಇದನ್ನೂ ಓದಿ : ನೀವು ಮತಗಟ್ಟೆಗೆ ತೆರಳೋ ಮುನ್ನ ಈ ದಾಖಲೆಗಳು ನಿಮ್ಮ ಬಳಿ ಇರಲೇ ಬೇಕು..!
ನಾಳೆ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ವೋಟಿಂಗ್ ಮಾಡಿದ ಬಳಿಕ ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತದೆ. ಈ ಅಳಿಸಲಾಗದ ಶಾಯಿಯನ್ನ ಮೈಸೂರಿನಿಂದ ಪೂರೈಕೆ ಮಾಡಿಕೊಳ್ಳಲಾಗುತ್ತಿದೆ.
ಮೇ 10ರಂದು ನಾಳೆ ನಡೆಯಲಿರುವ ರಾಜ್ಯಗಳ ವಿಧಾನಸಭೆ ಚುನಾವಣೆಗೂ ಮೈಸೂರಿನ ಕಪ್ಪು ಶಾಯಿ ರವಾನೆಯಾಗಿದೆ. ಚುನಾವಣಾ ಆಯೋಗದ ಬೇಡಿಕೆ ಹಿನ್ನೆಲೆ 1 ಲಕ್ಷದ 20 ಸಾವಿರ ಬಾಟಲ್ ಪೂರೈಕೆ ಮಾಡಲಾಗಿದೆ. ಸ್ವಾತಂತ್ರ್ಯ ನಂತರದ ಎಲ್ಲಾ ಸಾರ್ವತ್ರಿಕ ಚುನಾವಣೆಗಳಿಗೂ ಮೈಸೂರಿನಿಂದಲೇ ಶಾಯಿ ಪೂರೈಕೆಯಾಗುತ್ತಿದೆ.