ಬೆಂಗಳೂರು : ತಂತ್ರಜ್ಞಾನದ ನೆರವಿನಿಂದ ಸಾರ್ವಜನಿಕ ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸಲಾಗುತ್ತಿದೆ ಎಂದು ಸಚಿವ ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಶ್ವತ್ಥ ನಗರ, ಏಜೀಸ್ ಬಡಾವಣೆ ಮತ್ತು ಗಾಯತ್ರಿನಗರಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದ ನಗರಕ್ಕೆ ಸಬರ್ಬ್ ರೈಲು ವ್ಯವಸ್ಥೆ ಕೂಡ ಬರುತ್ತಿದೆ. ಇದಲ್ಲದೆ, ಹಲವು ಯೋಜನೆಗಳಡಿ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ : ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ‘ಮತ್ತೊಮ್ಮೆ ನನಗೆ ಆಶೀರ್ವದಿಸಿ’ : ಸಚಿವ ಕೆ.ಗೋಪಾಲಯ್ಯ
ಬೆಂಗಳೂರು ಹೂಡಿಕೆ ಆಕರ್ಷಕ ತಾಣ
ಕಳೆದ ಮೂರೂವರೆ ವರ್ಷಗಳಲ್ಲಿ ಬಿಜೆಪಿ ಸರಕಾರವು ಬೆಂಗಳೂರು ನಗರವನ್ನು ಹೂಡಿಕೆಯ ಆಕರ್ಷಕ ತಾಣವನ್ನಾಗಿ ಮಾಡಿದೆ. ಜೊತೆಗೆ ನಗರದ ಮೂಲಸೌಕರ್ಯಗಳನ್ನು ಹಲವು ಪಟ್ಟು ಸುಧಾರಿಸಿದೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.
ರಾಜಧಾನಿ ಶೈಕ್ಷಣಿಕ ಹಬ್
ಬೆಂಗಳೂರು ನಗರವು ನಮ್ಮ ಸರಕಾರದ ಅರ್ಥಪೂರ್ಣ ನೀತಿಗಳ ಫಲವಾಗಿ ಸ್ಟಾರ್ಟಪ್ ರಾಜಧಾನಿಯಾಗಿ ಹೊರಹೊಮ್ಮಿದೆ. ಜತೆಗೆ ರಾಜಧಾನಿಯನ್ನು ಶೈಕ್ಷಣಿಕ ಹಬ್ ಆಗಿ ಪರಿವರ್ತಿಸಲಾಗಿದೆ. ಇದರಿಂದಾಗಿ ನಗರವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ ಎಂದು ಅವರು ಬಿಜೆಪಿ ಸರ್ಕಾರದ ಸಾಧನೆಗಳನ್ನ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.