ಬೆಂಗಳೂರು : ಬಿಜೆಪಿ ಪಕ್ಷ ‘ಕುಟುಂಬ ರಾಜಕಾರಣ’ದ ವಿರುದ್ಧವಾಗಿದೆ ಎಂದು ಸಚಿವ ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದರು.
ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್. ರವೀಂದ್ರ ಮತ್ತು ಗೋವಿಂದರಾಜ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಶೆಟ್ಟಿ ಪರ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರು ಬಿರುಸಿನ ಪ್ರಚಾರ ನಡೆಸಿದರು.
ಮೊದಲಿಗೆ, ವಿಜಯನಗರ ಕ್ಷೇತ್ರದ ವ್ಯಾಪ್ತಿಯ ದೀಪಾಂಜಲಿ ನಗರದ ಮೆಟ್ರೋ ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಬಳಿಕ ಹೊಸಕೆರೆಹಳ್ಳಿ, ಗಿರಿನಗರ ಸುತ್ತಲಿನ ಪ್ರದೇಶಗಳಲ್ಲಿ ಬಿಜೆಪಿ ಕಾರ್ಯಕರ್ತರ ಬೈಕ್ ರ್ಯಾಲಿ ಮೂಲಕ ಮತಯಾಚನೆ ಮಾಡಿದರು.
ಕರ್ನಾಟಕದ ಸರ್ವಾಂಗೀಣ ಪ್ರಗತಿ
ಪ್ರಚಾರದ ವೇಳೆ ಮಾತನಾಡಿದರುವ ಅವರು, ಜನ ಸಮುದಾಯಗಳ ಪರವಾಗಿರುವ ಬಿಜೆಪಿ ಪಕ್ಷಕ್ಕೆ ಈ ಬಾರಿ ಸ್ಪಷ್ಟ ಜನಾದೇಶ ಕೊಡುವ ಮೂಲಕ ಬೆಂಗಳೂರು ಮತ್ತು ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಜತೆಯಾಗಿ ನಿಲ್ಲಬೇಕು ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಮನವಿ ಮಾಡಿದರು.
ಇದನ್ನೂ ಓದಿ : ಡಿಕೆಶಿ ನೋಡಿದ್ರೆ ಯಾರು ವೋಟ್ ಹಾಕುತ್ತಾರೆ : ಅಶ್ವತ್ಥನಾರಾಯಣ ಲೇವಡಿ
ಕಾಂಗ್ರೆಸ್–ಜೆಡಿಎಸ್ ಅಪವಿತ್ರ ಮೈತ್ರಿ
ಕಳೆದ ಬಾರಿ ಬಿಜೆಪಿಗೆ ಸ್ವಲ್ಪದರಲ್ಲಿ ಸ್ಪಷ್ಟ ಬಹುಮತ ತಪ್ಪಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಜನಾದೇಶವನ್ನೇ ಧಿಕ್ಕರಿಸಿದವು. ಆದರೆ, ಬಿಜೆಪಿ ತನಗೆ ಸಿಕ್ಕಿದ ಮೂರೂವರೆ ವರ್ಷಗಳ ಅವಕಾಶದಲ್ಲಿ ಕೋವಿಡ್, ಅತಿವೃಷ್ಟಿಯಂತಹ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದೆ. ಡಬಲ್ ಎಂಜಿನ್ ಸರಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಪರ್ವವೇ ಸೃಷ್ಟಿಯಾಗಿದೆ ಎಂದು ಹೇಳಿದರು.
ಇದೇ ವೇಳೆ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಹಲವು ಪ್ರದೇಶಗಳಲ್ಲಿ ಅಭ್ಯರ್ಥಿ ಉಮೇಶ ಶೆಟ್ಟಿ ಪರವಾಗಿ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಎರಡೂ ಕ್ಷೇತ್ರಗಳ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಜತೆಯಲ್ಲಿ ಹೆಜ್ಜೆ ಹಾಕಿದರು.