ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಮುಂದಿನ ಮುಖ್ಯಮಂತ್ರಿ ಪಟ್ಟದ ಮೇಲೆ ಎಲ್ಲ ಪಕ್ಷಗಳ ನಾಯಕರು ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ಹೆಚ್ಚೇ ಇದೆ ಎನ್ನಬಹುದು.
ಹೌದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ ಹಾದಿಯಾಗಿ ಪ್ರಭಾವಿ ಧುರೀಣರ ದಂಡೇ ಇದೆ. ಈ ಮಧ್ಯೆ ಡಿ.ಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ದಾಳ ಪ್ರಯೋಗ ಮಾಡಿ, ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಿ.ಕೆ ಶಿವಕುಮಾರ್, ಪರೋಕ್ಷವಾಗಿ ಮುಖ್ಯಮಂತ್ರಿ ಆಗುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ.
ಜೆಡಿಎಸ್ ಕಾರ್ಯಕರ್ತರೇ ಇಲ್ಲಿ ಕೇಳಿ
ನನ್ನ ಭಾಷಣ ಯಾರು ಕೇಳಬೇಡಿ. ಕೇವಲ ಜೆಡಿಎಸ್ ಕಾರ್ಯಕರ್ತರು ಮಾತ್ರ ನನ್ನ ಮಾತು ಕೇಳಿ. ಮರಕ್ಕೆ ಹೇಗೆ ಬೇರು ಮುಖ್ಯಾನೋ, ಅದೇ ರೀತಿ ಮನುಷ್ಯನಿಗೆ ನಂಬಿಕೆ ಮುಖ್ಯ. ಏಳಕ್ಕೆ ಏಳು ಜೆಡಿಎಸ್ ಶಾಸಕರನ್ನ ಗೆಲ್ಲಿಸಿದ್ದೀರ. ಆದ್ರೆ, ಅವರ ಕೊಡುಗೆ ಏನು? ರಾಜ್ಯಕ್ಕೆ ಎಚ್.ಡಿ ಕುಮಾರಸ್ವಾಮಿಯವರ ಕೊಡುಗೆಯೇನು ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಜನರ ಶ್ರೇಯೋಭಿವೃದ್ಧಿಗೆ ಕೃಷ್ಣಪ್ಪ ಕಂಕಣಬದ್ದ : ಸಿಎಂ ಬೊಮ್ಮಾಯಿ
ಸಿಎಂ ಆಗುವ ಆಸೆ ಬಿಚ್ಚಿಟ್ಟ ಡಿಕೆಶಿ
ಇದೇ ವೇಳೆಯಲ್ಲಿ ನಾನು ಈ ಮಣ್ಣಿನ ಮಗ, ನನಗೂ ಒಂದು ಅವಕಾಶ ಮಾಡಿಕೊಡಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಆ ಮೂಲಕ ಒಕ್ಕಲಿಗ ಸಮುದಾಯದ ದಾಳ ಪ್ರಯೋಗಿಸಿ, ತಾನು ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಸಂಸದ ಡಿ.ಕೆ ಸುರೇಶ್ ಮಾತನಾಡಿದ್ದರು. ಒಕ್ಕಲಿಗ ಸಮುದಾಯದಲ್ಲಿ ಡಿ.ಕೆ ಶಿವಕುಮಾರ್ ಸಿಎಂ ಆಗುವ ಕಾಲ ಬಂದಿದೆ ಎಂದಿದ್ದರು. ಇದೀಗ ಡಿ.ಕೆ ಶಿವಕುಮಾರ್ ಸಿಎಂ ಆಗುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ.