ಬೆಂಗಳೂರು : ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಕರ್ನಾಟಕವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುತ್ತಿದೆ. ಬಿಜೆಪಿ ಮಹಾಭಾರತದ ಬಕಾಸುರನಿದ್ದಂತೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಮಹಾಭಾರತದಲ್ಲಿ ಬಕಾಸುರನಿಗೆ ಎಷ್ಟು ಕೊಟ್ಟರೂ ತಿನ್ನುತ್ತಿದ್ದನಂತೆ. ಅದೇ ರೀತಿ ಈ 40% ಕಮಿಷನ್ ಸರ್ಕಾರ ರಾಜ್ಯದ ಜನರ ಪಾಲಿಗೆ ಭ್ರಷ್ಟಾಚಾರದ ಬಕಾಸುರನಾಗಿದೆ. ಜನರ ಹಣ ಹಾಗೂ ಜೀವನವನ್ನೇ ನುಂಗುತ್ತಿದೆ ಎಂದು ಛೇಡಿಸಿದ್ದಾರೆ.
ಕಾರ್ಮಿಕ ಇಲಾಖೆಯ ಟೆಂಡರ್ ದಾಖಲೆಯಲ್ಲಿ ಯಾರು ಈ ಟೆಂಡರ್ ಪಡೆಯುತ್ತಾರೋ ಅವರೇ ಮೂರನೇ ವ್ಯಕ್ತಿ ನೇಮಿಸಿ ಸಮೀಕ್ಷೆ ಹಾಗೂ ಗುಣಮಟ್ಟದ ಪರೀಕ್ಷೆ ಮಾಡಿಸಿ ಆ ಬಗ್ಗೆ ಸರ್ಕಾರಕ್ಕೆ ಪತ್ರ ನೀಡಬೇಕು ಎಂದು ತಿಳಿಸಲಾಗಿದೆ. ಶಾಲಾ ಕಿಟ್ ಗಳನ್ನು ಕಾರ್ಮಿಕರ ಮಕ್ಕಳ ಪೈಕಿ 5ನೇ ತರಗತಿಯವರಿಗೆ ಮೊದಲು ನೀಡಿ, ನಂತರ ಉಳಿದರೆ 4,3,2,1ರಂತೆ ತರಗತಿ ವಿದ್ಯಾರ್ಥಿಗಳಿಗೆ ನೀಡಬೇಕು. ಹಾಗಿದ್ದರೆ ಇದನ್ನು ಕೇವಲ 5ನೇ ತರಗತಿಗೆ ಎಂದು ಟೆಂಡರ್ ಕರೆಯಬಹುದಿತ್ತಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಅಂಕಿ ಅಂಶಗಳು ಇಲ್ಲದೇ ಟೆಂಡರ್
ಸರ್ಕಾರದ ಬಳಿ ಯಾವ ತರಗತಿಯಲ್ಲಿ ಎಷ್ಟು ಜನ ನೊಂದಾಯಿತ ಕಾರ್ಮಿಕ ಮಕ್ಕಳಿದ್ದಾರೆ ಎಂಬ ಅಂಕಿ ಅಂಶಗಳಿಲ್ಲ. ಸಮೀಕ್ಷೆ ನಡೆಸದೇ, ಅಂಕಿ ಅಂಶಗಳು ಇಲ್ಲದೇ ಈ ಟೆಂಡರ್ ಕರೆದಿದ್ದಾರೆ. ಇದು ಆಡಳಿತ ನಡೆಸುವ ರೀತಿಯೇ? ಇದು ಕಾರ್ಮಿಕರ ಅಭಿವೃದ್ಧಿಗೆ ತೆಗೆದುಕೊಂಡಿರುವ ತೀರ್ಮಾನವೇ? ಸಾಮಾನ್ಯವಾಗಿ ಸಮೀಕ್ಷೆ ಮಾಡಿ ನಂತರ ಎಷ್ಟು ಮಕ್ಕಳಿದ್ದಾರೆ ಎಂದು ಅಂಕಿ ಅಂಶ ಪಡೆದು ಆ ನಂತರ ಟೆಂಡರ್ ಕರೆಯಬೇಕು. ಆದರೆ ಇಲ್ಲಿ ಯಾವುದೇ ಮಾಹಿತಿ ಇಲ್ಲದೇ ಈ ಟೆಂಡರ್ ಕರೆದಿದ್ದಾರೆ. ಈ ಇಲಾಖೆ ಕಾರ್ಮಿಕರ ಏಳಿಗೆಗಾಗಿ ಏನು ಮಾಡುತ್ತಿದ್ದಾರೆ? ಎಂದಿದ್ದಾರೆ.
ದುಡಿಯುವ ಕೈಯಿಂದ ಕಿತ್ತು ತಿನ್ನುತ್ತಿದ್ದಾರೆ
ಬಿಜೆಪಿ ಭರವಸೆ ಎಂದು ಪೋಸ್ಟರ್ ಹಾಕುತ್ತಾರೆ. ಕಾರ್ಮಿಕರಿಗೆ 10 ಭರವಸೆ ನೀಡಿದ್ದು ಒಂದಾದರೂ ಭರವಸೆ ಈಡೇರಿಸಿದ್ದೀರಾ? ಈ ಸರ್ಕಾರ ದುಡಿಯುವ ಕೈಯಿಂದ ಕಿತ್ತು ತಿನ್ನುತ್ತಿದ್ದಾರೆ. ಕಾರ್ಮಿಕರು, ಮೇಷನ್, ಎಲೆಕ್ಟ್ರಿಷಿಯನ್ ಕಿಟ್ ಗಳಲ್ಲಿ ಹಗರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯವರಿಗೆ ಧಮ್ಮು, ತಾಕತ್ತು ಇದ್ರೆ..
ಬಿಜೆಪಿಯವರಿಗೆ ಧಮ್ಮು, ತಾಕತ್ತು ಇದ್ದರೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ಮಾಡಿಸಲಿ. ಅವರು ಎಲ್ಲಿ ಹೇಳುತ್ತಾರೋ ಅಲ್ಲಿ ಹೋಗಿ ನಾವು ಸಾಕ್ಷಿ ನೀಡುತ್ತೇವೆ. ಇವರು ನ್ಯಾಯಾಂಗ ತನಿಖೆ ನೀಡುವುದು ಅನುಮಾನ. ನಾವು ಕಾರ್ಮಿಕರ ಪರವಾಗಿ ನಿಲ್ಲುತ್ತೇವೆ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ತನಿಖೆ ಮಾಡಿಸುತ್ತೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.