ಬೆಂಗಳೂರು : ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಇಂದೋರ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ಹಲವು ದಾಖಲೆಗೆ ಮುನ್ನುಡಿ ಬರೆದಿದೆ. ಜೊತೆಗೆ, ಒಂದು ಮನಮಿಡಿಯುವ ಸನ್ನಿವೇಶಕ್ಕೂ ಸಾಕ್ಷಿಯಾಗಿದೆ.
ಇಂದೋರ್ ಟೆಸ್ಟ್ ನಲ್ಲಿ ತಂಡಕ್ಕೆ ಮರಳಿರುವ ಟೀಂ ಇಂಡಿಯಾ ಬೌಲರ್ ಉಮೇಶ್ ಯಾದವ್ ಅದ್ಭುತ ಬೌಲಿಂಗ್ ಮಾಡಿದ್ದಾರೆ. ಅಗಲಿದ ತಂದೆಯ ದುಃಖದ ಸಮಯದಲ್ಲಿ ಉಮೇಶ್ ಯಾದವ್ ನೀಡಿರುವ ಅದ್ಭುತ ಪ್ರದರ್ಶನಕ್ಕೆ ಕ್ರಿಕೆಟ್ ಅಭಿಮಾನಿಗಳು ಸಲಾಂ ಎಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯ ಎರಡನೇ ದಿನದ ಮೊದಲ ಸೆಷನ್ ನಲ್ಲಿ ಡ್ರಿಂಕ್ಸ್ ಬ್ರೇಕ್ ನಂತರ ಉಮೇಶ್ ಯಾದವ್ ಬೌಲಿಂಗ್ ಮಾಡಿದರು. ಆಸಿಸ್ ನ ಮೂರು ಪ್ರಮುಖ ವಿಕೆಟ್ ಗಳನ್ನು ಕಬಳಿಸುವ ಮೂಲಕ ತವರಿನಲ್ಲಿ 100 ವಿಕೆಟ್ ಪಡೆದ ಗೌರವಕ್ಕೆ ಭಾಜನರಾದರು.
ಇದನ್ನೂ ಓದಿ : WPL 2023 : ಹೊಸ ಜೆರ್ಸಿ ಅನಾವರಣಗೊಳಿಸಿದ RCB
ಫೆ.23ರಂದು ಉಮೇಶ್ ತಂದೆ ಸಾವು
ಕಳೆದ ಫೆಬ್ರವರಿ 23ರಂದು ಉಮೇಶ್ ಯಾದವ್ ಅವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಆ ದುಃಖದ ನಡುವೆಯೂ ಉಮೇಶ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಬ್ಯಾಟಿಂಗ್ ನಲ್ಲೂ ಮಿಂಚಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಿಕ್ಸರ್ ಕಿಂಗ್ ಯುವಿ ದಾಖಲೆ ಉಡೀಸ್
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಉಮೇಶ್ ಯಾದವ್ ಅವರು ಎರಡು ಸಿಕ್ಸರ್ ಸಿಡಿಸುವ ಮೂಲಕ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಹಾಗೂ ರವಿಶಾಸ್ತ್ರಿ ದಾಖಲೆಯನ್ನು ಮುರಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಸೆಹ್ವಾಗ್ 91 ಸಿಕ್ಸರ್ ಹಾಗೂ ಎಂ.ಎಸ್ ಧೋನಿ 78 ಸಿಕ್ಸರ್ ಗಳೊಂದಿಗೆ ಮೊದಲೆರಡು ಸ್ಥಾನದಲ್ಲಿದ್ದಾರೆ.