ಇತಿಹಾಸ ನಿರ್ಮಿಸುವವರು ಎದ್ದು ಬರುವುದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬಗಳಿಂದಲೇ.. ದೇಶಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಟ್ಟ ಕಪಿಲ್ ದೇವ್, ಎರಡೆರಡು ವಿಶ್ವಕಪ್ ಗೆದ್ದು ಕೊಟ್ಟ ಎಂ.ಎಸ್ ಧೋನಿ, ಬ್ಯಾಟಿಂಗ್ ಸಾಮ್ರಾಟ ಸಚಿನ್ ತೆಂಡೂಲ್ಕರ್, ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ. ಇವರೆಲ್ಲಾ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿದವರಲ್ಲ. ಅಷ್ಟೂ ಮಂದಿ ಮಧ್ಯಮ ವರ್ಗ ಅಥವಾ ಕೆಳ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದವರು. ಇವರೆಲ್ಲಾ ತಮ್ಮ ಸೀಮೆಯಲ್ಲಿ ಮಾಡಿದ ಸಾಧನೆ, ಏರಿದ ಎತ್ತರವಿದೆಯಲ್ಲಾ.. ಎಲ್ಲವೂ ಒಂದೊಂದು ಚರಿತ್ರೆ. ಇವರದ್ದೇ ಸಾಲಿನಲ್ಲಿ ನಿಲ್ಲುವವನು ರೋಹಿತ್ ಶರ್ಮಾ.
ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ‘ರೋಹಿತ್ ಶರ್ಮಾ ಸ್ಟ್ಯಾಂಡ್'(Rohit Sharma Stand) ಅನಾವರಣ ಕಾರ್ಯಕ್ರಮದಲ್ಲಿ ರೋಹಿತ್ ಮಾತನಾಡುತ್ತಿದ್ದಾಗ ವೇದಿಕೆಯ ಮುಂಭಾಗದಲ್ಲಿ ಕೂತಿದ್ದ ತಂದೆ ಗುರುನಾಥ್ ಶರ್ಮಾ ಮತ್ತು ತಾಯಿ ಪೂರ್ಣಿಮಾ ಶರ್ಮಾ ಕಣ್ಣೀರಾಗಿದ್ದರು. ಅವರ ಕಣ್ಣೀರಿಗೆ ಕಾರಣ, ತಮ್ಮ ಮುಂದೆ ಭಾರತದ ಕ್ರಿಕೆಟ್ ದಿಗ್ಗಜನಾಗಿ ನಿಂತಿದ್ದ ಮಗ ಅಲ್ಲಿವರೆಗೆ ತಲುಪುವ ಹಾದಿಯಲ್ಲಿ ಅನುಭವಿಸಿದ ಕಷ್ಟಗಳು.
ರೋಹಿತ್ ಶರ್ಮಾ ಥಾಣೆಯ ದೊಂಬಿವಿಲಿಯವನು. ಮಾತೃಭಾಷೆ ತೆಲುಗು. ತಾಯಿ ಪೂರ್ಣಿಮಾ ಶರ್ಮಾ ಆಂಧ್ರಪ್ರದೇಶದ ವಿಶಾಖಪಟ್ಟಣದವರು. ತಂದೆ ಗುರುನಾಥ್ ಶರ್ಮಾ ಟ್ರಾನ್ಸ್’ಪೋರ್ಟ್ ಕಂಪನಿಯೊಂದರ ಉಗ್ರಾಣದ ಉಸ್ತುವಾರಿಯಾಗಿದ್ದವರು. ಬೆರಳೆಣಿಕೆಯ ಸಾವಿರಗಳ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದ ತಂದೆ.
ಕಣ್ಣ ಮುಂದೆಯೇ ಗವಾಸ್ಕರ್, ತೆಂಡೂಲ್ಕರ್’ರಂತಹ ದಿಗ್ಗಜರಿರುವಾಗ ಮುಂಬೈ ಹುಡುಗರಿಗೆ ಕ್ರಿಕೆಟ್ ಹುಚ್ಚು ಹಿಡಿಯದಿರಲು ಸಾಧ್ಯವೇ ಇಲ್ಲ. ಹಾಗೆ ಕ್ರಿಕೆಟ್ ಗೀಳು ಅಂಟಿಸಿಕೊಂಡವನು ರೋಹಿತ್ ಶರ್ಮಾ. ಆದರೆ ಮಗನನ್ನು ಕ್ರಿಕೆಟ್ ಆಡಿಸುವಷ್ಟು ಶಕ್ತಿ ತಂದೆಗಿರಲಿಲ್ಲ. ದೊಂಬಿವಿಲಿಯ ಸಿಂಗಲ್ ರೂಮ್’ನಲ್ಲಿ ಬದುಕಿದ್ದ ಕೆಳ ಮಧ್ಯಮ ವರ್ಗದ ಕುಟುಂಬ. ಮಗನಿಗೋ, ಕ್ರಿಕೆಟ್ ಆಡಲೇಬೇಕೆಂಬ ಹಠ.
ರೋಹಿತ್ ಶರ್ಮಾನನ್ನು ಹತ್ತಾರು ವರ್ಷಗಳಿಂದ ತುಂಬಾ ಹತ್ತಿರದಿಂದ ನೋಡಿರುವ ಮುಂಬೈನ ಪತ್ರಕರ್ತ ಗೆಳೆಯನೊಬ್ಬನ ಬಳಿ ಕೆಲ ವರ್ಷಗಳ ಹಿಂದೆ ಮಾತನಾಡುತ್ತಿದ್ದಾಗ ಆತ ರೋಹಿತ್’ನ ಜೀವನದ ಕಥೆ ಹೇಳಿದ್ದ.
ಮಗ ಕ್ರಿಕೆಟ್ ಆಡುವುದು ತಂದೆಗೆ ಇಷ್ಟವೇ ಇರಲಿಲ್ಲ. ಕಾರಣ, ಮಗನ ಕನಸನ್ನು ಈಡೇರಿಸಲಾಗದ ಅಸಹಾಯಕತೆ. ಮಗ ಹಠಮಾರಿ. ಅವನಿಗೆ ಕ್ರಿಕೆಟ್ ಆಡಬೇಕು ಅಷ್ಟೇ..
ತಂದೆಯೊಂದಿಗೆ ಮುನಿಸಿಕೊಂಡು ದೊಂಬಿವಿಲಿಯಿಂದ 47 ಕಿ.ಮೀ ದೂರದ ಬೊರಿವಾಲಿಯಲ್ಲಿದ್ದ ಚಿಕ್ಕಪ್ಪನ ಮನೆಗೆ ಬರುತ್ತಾನೆ. 11 ವರ್ಷದ ಹುಡುಗ. ಕ್ರಿಕೆಟ್ ಆಡಲೇಬೇಕೆಂದು ಬಂದವನು. ಹುಡುಗನ ಕನಸಿಗೆ ಬೆನ್ನೆಲುಬಾಗಿ ನಿಂತ ಚಿಕ್ಕಪ್ಪ, ದಿನೇಶ್ ಲಾಡ್ ಎಂಬ ಕ್ರಿಕೆಟ್ ಕೋಚ್ ನಡೆಸುತ್ತಿದ್ದ ಅಕಾಡೆಮಿಗೆ ರೋಹಿತ್’ನನ್ನು ಸೇರಿಸುತ್ತಾರೆ. ಹೀಗೆ ಶುರುವಾಗಿದ್ದ ಕ್ರಿಕೆಟ್ ಪಯಣದಲ್ಲಿ ರೋಹಿತ್ ಶರ್ಮಾ ಸಾಕಷ್ಟು ಬಾರಿ ಬಿದ್ದಿದ್ದಾನೆ, ಎದ್ದಿದ್ದಾನೆ. ಒಂದೇ ಒಂದು ಕ್ರಿಕೆಟ್ ಕಿಟ್’ಗಾಗಿ ಹಣ ಹೊಂದಿಸಲು ಬೊರಿವಲಿ ಬೀದಿಗಳಲ್ಲಿ ಹಾಲು ಮಾರಿದ್ದ. ಹಾಲಾಹಲವನ್ನೇ ಕುಡಿದ ಅನುಭವ ನೀಡುವಂಥ ಕಷ್ಟಗಳನ್ನು ಎದುರಿಸಿದ್ದ.
ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಲು ತವಕಿಸುತ್ತಿದ್ದ ಹುಡುಗನ ಹೆಸರಲ್ಲಿ ಅದೇ ವಾಂಖೆಡೆಯಲ್ಲೊಂದು stand. ಸಾಧನೆಯೆಂದರೆ ಇದು.
ರೋಹಿತ್ ಶರ್ಮಾನ ಆಟ ನೋಡಿದಾಗಲೆಲ್ಲಾ ‘ಬ್ಯಾಟಿಂಗ್ ಇಷ್ಟು ಸುಲಭವೇ’ ಎಂಬ ಭಾವನೆ ಹುಟ್ಟಿಕೊಳ್ಳುತ್ತದೆ. ಅವನ ಆಟ ಅಷ್ಟು ಸರಳ, ಅಷ್ಟೇ ಲೀಲಾಜಾಲ. ಅದರಲ್ಲೂ ಅವನು ಬಾರಿಸುವ ಫುಲ್ ಶಾಟ್’ಗಳು. ಬಹುಶಃ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರ ನಂತರ (ಪುಲ್ ಶಾಟ್) pull shotಗಳನ್ನು ಅದ್ಭುತವಾಗಿ ಬಾರಿಸಿದ ಕ್ರಿಕೆಟರ್ ಯಾರಾದರೂ ಇದ್ದರೆ ಅದು ರೋಹಿತ್ ಶರ್ಮಾ.
ಭಾರತಕ್ಕೆ ಒಂದೇ ವರ್ಷದ ಅವಧಿಯಲ್ಲಿ ಎರಡು ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿ ಕೊಟ್ಟಿರುವ ನಾಯಕ. ಕ್ರಿಕೆಟಿಗನಾಗುವ ಕನಸು ಕಾಣುವ ಮಧ್ಯಮ ವರ್ಗದ ಹುಡುಗರ ಅತೀ ದೊಡ್ಡ ಸ್ಫೂರ್ತಿಗಳಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬ. ಅವನ ಆಟವನ್ನೇ ನೋಡುತ್ತಾ ಕ್ರಿಕೆಟ್ ಕಲಿತು ಇವತ್ತಿಗೆ ಮುಂಬೈ ತಂಡದಲ್ಲಿ ಆಡುತ್ತಿರುವ ಹುಡುಗರ ದೊಡ್ಡ ದಂಡೇ ಇದೆ. ಅವರೆಲ್ಲರ ಪಾಲಿಗೆ ರೋಹಿತ್ ಶರ್ಮಾ ಪ್ರೀತಿಯ ‘ಭಯ್ಯಾ’.
ಮುಂಬೈ ಪರ ಆಡುವ ಕನಸು ಕಂಡವನ ಹೆಸರು ಇವತ್ತು ವಾಂಖೆಡೆ ಕ್ರೀಡಾಂಗಣದ ಒಂದು ಗ್ಯಾಲರಿಯಲ್ಲಿ ರಾರಾಜಿಸುತ್ತಿದೆ. ಅಜಿತ್ ವಾಡೇಕರ್, ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ಸರ್ಕರ್, ಸಚಿನ್ ತೆಂಡೂಲ್ಕರ್ ಸಾಲಿನಲ್ಲಿ ರೋಹಿತ್ ಶರ್ಮಾ ಹೆಸರು. ತಂದೆಯ ವಿರೋಧ ಕಟ್ಟಿಕೊಂಡು ಹಠ ಹಿಡಿದು ಕ್ರಿಕೆಟ್ ಆಡಿದವನಿಗೆ ಅದೇ ತಂದೆಯ ಮುಂದೆ ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ಅತೀ ದೊಡ್ಡ ಗೌರವ.. ಅಪ್ಪ-ಅಮ್ಮ ಕೈಯಿಂದಲೇ Rohit Sharma Stand ಅನಾವರಣ, ರೋಹಿತ್ ಪಾಲಿಗೆ ಸಂದ ಮತ್ತೊಂದು ಗೌರವ.
ಅಪ್ಪ-ಅಮ್ಮನಿಂದ ದೂರವೇ ಇದ್ದು ಕ್ರಿಕೆಟ್ ಕಲಿತು ಆಡಿದವನು. ದೇಶದ ಅತೀ ದೊಡ್ಡ ಕ್ರಿಕೆಟ್ ಹೀರೋಗಳಲ್ಲಿ ಒಬ್ಬನೆನಿಕೊಂಡವನು. ಮಗನ ಜೀವನದಲ್ಲಿ ನಡೆದ ಅಷ್ಟೂ ಘಟನೆಗಳು ಒಂದು ಕ್ಷಣ ಕಣ್ಣ ಮುಂದೆ ಬಂದವೋ ಏನೋ.. ಕಣ್ಣೀರಾಕಿದ ತಂದೆಯ ಜೊತೆ ತಾಯಿಯೂ ಕಣ್ಣೀರು ಸುರಿಸಿದರು.
– ಸುದರ್ಶನ್