ಮಂಡ್ಯ : ಹಳೇ ದ್ವೇಷಕ್ಕೆ ಮಂಡ್ಯದ ಮಾಣಿಕ್ಯನಹಳ್ಳಿಯಲ್ಲಿ ಇಂದು ಬೆಳ್ಳಂ ಬೆಳಗ್ಗೆ ವ್ಯಕ್ತಿಯೊಬ್ಬನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಟೀ ಕುಡಿತಿದ್ದಾತನಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದು. ಕೊಲೆಯಾದ ದುರ್ದೈವಿಯನ್ನು ನರಸಿಂಹ ಎಂದು ಗುರುತಿಸಲಾಗಿದೆ.
ಮಂಡ್ಯದ ಪಾಂಡವಪುರ ತಾಲ್ಲೂಕಿನ ಮಾಣಿಕ್ಯನಹಳ್ಳಿಯಲ್ಲಿ ಘಟನೆ ನಡೆದಿದ್ದು. ಗ್ರಾಮದ ನರಸಿಂಹ ಎಂಬ ವ್ಯಕ್ತಿಯನ್ನ ಅದೇ ಗ್ರಾಮದ ವೆಂಕಟೇಶ್ ಹಾಗೂ ಮಂಜುನಾಥ್ ಎಂಬ ಇಬ್ಬರು ಬರ್ಬರವಾಗಿ ಇಂದು ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ವಿಚಾರಕ್ಕೆ ಜಗಳ: ಎಣ್ಣೆ ಹೊಡೆಯಲು ಕರೆದೊಯ್ದು ಎದೆಗೆ ಚಾಕು ಇರಿದ ದುಷ್ಕರ್ಮಿಗಳು
ಹಳೆ ದ್ವೇಷ: ಮಗಳ ಹತ್ಯೆಯ ಸೇಡು ತೀರಿಸಿಕೊಂಡ ಅಪ್ಪ..!
ಇನ್ನು ನರಸಿಂಹನ ಹತ್ಯೆಗೆ ಹಳೇ ದ್ವೇಷ ಕಾರಣ ಎಂದು ತಿಳಿದು ಬಂದಿದ್ದು. ಕೊಲೆಯಾದ ನರಸಿಂಹನ ಮಗ ಕೊಲೆ ಮಾಡಿರುವ ವೆಂಕಟೇಶ್ ಮಗಳನ್ನು ಪ್ರೀತಿಸುತ್ತಿದ್ದ, ಆದರೆ 2024ರ ಜನವರಿ 20ರಂದು ನಿತೀಶ್ ದೀಪಿಕಾಳನ್ನು ಕೊಲೆ ಮಾಡಿದ್ದನು. ಇದಾದ ನಂತರ ಎರಡು ಕುಟುಂಬಗಳ ನಡುವೆ ವೈಶಮ್ಯ ಏರ್ಪಟ್ಟಿತ್ತು. ಮೃತ ದೀಪಿಕಾಳ ತಂದೆ ವೆಂಕಟೇಶ್ ಮಗಳ ಸಾವಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದನು. ಇದರ ಭಾಗವಾಗಿ ವೆಂಕಟೇಶ್ ಮತ್ತು ಆತನ ಸ್ನೇಹಿತ ನರಸಿಂಹನನ್ನು ಕೊಲೆ ಮಾಡಿದ್ದಾರೆ.
ವಿಪರ್ಯಾಸವೆಂದರೆ ಮೃತ ನರಸಿಂಹ ಕೂಡ ಮಗಳ ಮದುವೆಗೆ ಸಿದ್ದತೆಯನ್ನು ನಡೆಸಿದ್ದನು. ಯುವಕನೊಬ್ಬನ ಜೊತೆ ನಿಶ್ಚಿತಾರ್ಥವೂ ನಡೆದಿತ್ತು. ಮೊದಲೇ ಮಗಳನ್ನು ಕಳೆದುಕೊಂಡು ಕುದಿಯುತ್ತಿದ್ದ ವೆಂಕಟೇಶ್ ಈ ವಿಷಯವನ್ನು ತಿಳಿದು ಮತ್ತಷ್ಟು ಕೆರಳಿದ್ದ. ಸಮಯಕ್ಕಾಗಿ ಕಾಯುತ್ತಿದ್ದ ವೆಂಕಟೇಶ್ ಇಂದು ತನ್ನ ಸ್ನೇಹಿತ ಮಂಜುನಾಥ್ನೊಂದಿಗೆ ಟೀ ಕುಡಿಯುತ್ತಿದ್ದ ನರಸಿಂಹನ ಮೇಲೆ ಎರಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡುವಾಗಲೂ ‘ನನ್ನ ಮಗಳ ಕೊಲೆ ಮಾಡಿ ನಿನ್ನ ಮಗಳ ಮದುವೆ ಮಾಡುತ್ತಿದ್ದೀಯ’ ಎಂದೇಳಿ ಚುಚ್ಚಿ ಚುಚ್ಚಿ ಸಾಯಿಸಿದ್ದಾನೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಗ್ಗೆ ಮೋದಿಗೆ ಗೊತ್ತಿತ್ತು, ಆದರೂ ಅವರು ಪ್ರವಾಸಿಗರ ಪ್ರಾಣ ಉಳಿಸಲಿಲ್ಲ: ಖರ್ಗೆ
ಇನ್ನು ನರಸಿಂಹನ ಹತ್ಯೆ ಬಳಿಕ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಮತ್ತೊಂದು ಕಡೆ ಮೇಲುಕೋಟೆ ಪೊಲೀಸರು ಈಗಾಗಲೇ ಆರೋಪಿ ವೆಂಕಟೇಶ್ ನನ್ನ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.