ಹಾಸನ : ಶಿಲ್ಪಕಲೆಗಳ ತವರು ಪ್ರಶಾಂತತೆಗೆ ಹೆಸರಾದ ಹಾಸನ ಜಿಲ್ಲೆಯಲ್ಲಿ ಕೆಲ ವರ್ಷಗಳಿಂದ ಕಾಡಾನೆ ಮಾನವ ಸಂಘರ್ಷ ಮಿತಿ ಮೀರಿಹೋಗಿದೆ. ಕಾಡಾನೆ ದಾಳಿಗೆ ರೈತರು ಹೈರಾಣಾಗಿದ್ದು ಕಾಡಾನೆ ದಾಳಿಗೆ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದು ಇಲ್ಲಿನ ಜನ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಈ ಹಿನ್ನಲೆ ಇಂದು ಮತ್ತೊಮ್ಮೆ ಕಾಡಾನೆ ಸ್ಥಳಾಂತರ ಕಾರ್ಯ ಮುಂದುವರೆದಿದ್ದು ಮೊದಲ ದಿನದ ಕಾರ್ಯಾಚರಣೆಯಲ್ಲೇ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಹಾಸನ ಜಿಲ್ಲೆಯ, ಮಲೆನಾಡು ಭಾಗದಲ್ಲಿ ಮಾನವ ಕಾಡಾನೆ ಸಂಘರ್ಷ ಮಿತಿಮೀರಿಹೋಗಿದೆ. ಈ ಹಿನ್ನಲೆ ಅನೇಕ ಬಾರಿ ಪುಂಡಾನೆ ಸೆರೆ ಕಾರ್ಯಾಚರಣೆಯನ್ನ ಅರಣ್ಯ ಇಲಾಖೆ ನಡೆಸಿದೆ. ಕಳೆದ ವಾರ ಸಕಲೇಶಪುರ ತಾಲ್ಲೂಕಿನ ಬೈಕೆರೆ ಗ್ರಾಮದ ಷಣ್ಮುಖ ಎನ್ನುವವರನ್ನ ಕಾಡಾನೆ ಬಲಿ ಪಡೆದಿದ್ದರಿಂದ ಸ್ಥಳೀಯರ ಆಗ್ರಹಕ್ಕೆ ಮಣಿದಿರೋ ಇಲಾಖೆ ಈ ಬಾರಿ ಮತ್ತೊಮ್ಮೆ ಕಾಡಾನೆ ಸ್ಥಳಾಂತರಕ್ಕೆ ಮುಂದಾಗಿದ್ದು ಈ ಬಾರಿ ಮೊದಲ ದಿನವೇ ಯಶಸ್ಸು ಸಿಕ್ಕಿದೆ. ತಾಲ್ಲೂಕಿನ ಹಲಸುಲಿಗೆ ಬಳಿಯ ಮಾಗಡಿ ಎಸ್ಟೇಟ್‌ನಲ್ಲಿ ಅಂದಾಜು 20 ವರ್ಷದ ಸಲಗ ಖೆಡ್ಡಾಕ್ಕೆ ಬಿದ್ದಿದೆ.
ಇದನ್ನೂ ಓದಿ :ಗಡ್ಡ ತೆಗೆಯಲು ಒಪ್ಪದ ಗಂಡ; ಮೈದುನನ ಜೊತೆ ಪರಾರಿಯಾದ ಹೆಂಡತಿ
ಗುರುವಾರ ಬೆಳಗ್ಗೆಯಿಂದ ಕರ್ನಾಟಕ ಭೀಮ ನೇತೃತ್ವದ ಆರು ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾಫಿ ತೋಟದ ಮಧ್ಯೆ ಅಡಗಿ ಕುಳಿತಿದ್ದ ಸಲಗನನ್ನು ಮೊದಲೇ ಅರಣ್ಯ ಸಿಬ್ಬಂದಿ ಗುರುತು ಮಾಡಿದ್ದರು. ಅದರಂತೆ ಅಲ್ಲಿಗೆ ತೆರಳಿದ ವೈದ್ಯರಾದ ಮುಜೀಬ್, ವಾಸಿಂ ಅವರು ಅರವಳಿಕೆ ಚುಚ್ಚುಮದ್ದು ನೀಡಿದರು. ಇಂಜೆಕ್ಷನ್ ನೀಡುತ್ತಿದ್ದಂತೆ ಸಲಗ ಓಡಲು ಅರಂಭಿಸಿತು. ಸ್ವಲ್ಪ ದೂರ ಓಡಿ ಚುಚ್ಚುಮದ್ದು ದೇಹ ಸೇರುತ್ತಿದ್ದಂತೆಯೇ ಪ್ರಜ್ಞೆ ತಪ್ಪಿ ಬಿದ್ದಿತು.
ಕೂಡಲೇ ಸ್ಥಳಕ್ಕೆ ದೌಡಾಯಿಸಿದ ವೈದ್ಯರು, ಅಧಿಕಾರಿಗಳು, ಸಿಬ್ಬಂದಿ, ಬಿಸಿಲು ಅತಿಯಾಗಿದ್ದರಿಂದ ಆನೆಗೆ ಗೋಣಿಚೀಲ ಹೊದಿಸಿ ನೀರು ಸುರಿದು ಆರೈಕೆ ಮಾಡಿದರು. ಎಲ್ಲರೂ ಸೇರಿ ಸೆರೆ ಸಿಕ್ಕ ಆನೆ ಕಾಲಿಗೆ ಹಗ್ಗ ಕಟ್ಟಿದ ನಂತರ ವೈದ್ಯರು ರಿವರ್ಸಲ್ ಇಂಜೆಕ್ಷನ್ ನೀಡಿದರು. ಕೆಲ ಹೊತ್ತು ಕಳೆದ ಮೇಲೆ ಸಲಗ ಸುಧಾರಿಸಿಕೊಂಡ ನಂತರ ಅದನ್ನು ಆರು ಸಾಕಾನೆಗಳು ರಸ್ತೆಗೆ ಎಳೆದು ತಂದವು. ಸದರಿ ಸಲಗ ಏ.25 ರಂದು ಬೈಕೆರೆಯಲ್ಲಿ ಷಣ್ಮುಖ ಎಂಬುವವರನ್ನು ಬಲಿ ಪಡೆದಿತ್ತು.
ಇದನ್ನೂ ಓದಿ :‘ಇಲ್ಲಿಂದ ಜೀವಂತವಾಗಿ ಹೋಗ್ತೀನಿ ಅನ್ನೋ ಗ್ಯಾರಂಟಿ ಇಲ್ಲ’: ಜೀವ ಬೆದರಿಕೆ ಬಗ್ಗೆ ಯು.ಟಿ ಖಾದರ್ ಮಾತು
ಅದಕ್ಕೂ ಮುನ್ನ ಇದೇ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ರಾಜು ಎಂಬುವರನ್ನು ತುಳಿದು ಗಂಭೀರವಾಗಿ ಗಾಯಗೊಳಿಸಿತ್ತು. ಇದರಿಂದ ತಾಲೂಕಿನಲ್ಲಿ ಕಾಫಿ ಬೆಳೆಗಾರರು, ಕಾರ್ಮಿಕರಲ್ಲಿ ಭಯದ ವಾತಾವರಣ ಹುಟ್ಟಿಸಿತ್ತು. ಇದೀಗ ಎಲ್ಲರೂ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಸಿಸಿಎಫ್ ಏಡುಕೊಂಡಲು, ಎಫ್‌ಒ ಸೌರಭ್‌ಕುಮಾರ್ ನೇತೃತ್ವದಲ್ಲಿ ನಡೆದ ಪುಂಡಾನೆ ಸೆರೆ ಕಾರ್ಯಾಚರಣೆ ನಡೆಯಿತು. ಕಡೆಗೆ ಲಾರಿ ಸಹಾಯದಿಂದ ಸೆರೆಸಿಕ್ಕ ಆನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಯಿತು.
ಒಟ್ಟಾರೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಗೆ ಜನ ಬೇಸತ್ತುಹೋಗಿದ್ದು ಕಾಡಾನೆ ಸ್ಥಳಾಂತರದ ಜೊತೆಗೆ ಶಾಶ್ವತ ಪರಿಹಾರ ನೀಡಬೇಕು ಎಂಬ ಆಗ್ರಹ ಮುಂದುವರಿದಿದೆ.