ಆಕಸ್ಮಿಕವಾಗಿ ಪಂಜಾಬ್‌ನ ಅಂತರರಾಷ್ಟ್ರೀಯ ಗಡಿ ದಾಟಿದ ಗಡಿ ಭದ್ರತಾ ಪಡೆಯ ಯೋಧ ಪೂರ್ಣಮ್ ಸಾಹು ಅವರನ್ನು ಪಾಕಿಸ್ತಾನದ ಸೇನೆ ವಶಕ್ಕೆ ಪಡೆದಿತ್ತು. ಈಗ ಪತಿಯ ಬಿಡುಗಡೆ ಸಂಬಂಧ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಸಲುವಾಗಿ ಬಿಎಸ್‌ಎಫ್ ಯೋಧನ ಪತ್ನಿ ರಜನಿ ಪಂಜಾಬ್‌ನ ಗಡಿ ಪ್ರದೇಶವಾದ ಫಿರೋಜ್‌ಪುರಕ್ಕೆ ಪಯಣ ಬೆಳೆಸಿದ್ದಾರೆ.
ಇದನ್ನೂ ಓದಿ :ಅಂದು DC, ಇಂದು ಪೊಲೀಸ್ ಅಧಿಕಾರಿ: ಸಿಎಂ ವರ್ತನೆ ಬಗ್ಗೆ ವಿಜಯೇಂದ್ರ ಆಕ್ರೋಶ
ಬಿಎಸ್‌ಎಫ್ ಯೋಧ ಪೂರ್ಣಮ್ ಸಾಹು ಅವರನ್ನು ಪಾಕ್ ಸೇನೆ ಕೆಲದಿನಗಳ ಹಿಂದೆ ವಶಕ್ಕೆ ಪಡೆದಿದ್ದು. ಸಾಹು ಅವರು ರೈತರ ಗುಂಪನ್ನು ಕರೆದೊಯ್ಯುತ್ತಿದ್ದ ವೇಳೆ, ವಿಶ್ರಾಂತಿಗಾಗಿ ಮರದ ಕೆಳಗೆ ಕುಳಿತಾಗ ತಿಳಿಯದೆ ಪಾಕಿಸ್ತಾನದ ಗಡಿ ದಾಟಿದ್ದಾರೆ. ಈ ವೇಳೆ ಪಾಕಿಸ್ತಾನಿ ರೇಂಜರ್ಸ್ ಅವರನ್ನು ವಶಕ್ಕೆ ಪಡೆದಿತ್ತು. ಸಾಹು ಅವರ ಬಂಧನದ ನಂತರ ಪಾಕಿಸ್ತಾನ ಸೇನೆ ಅವರ ಪೋಟೊವನ್ನು ಬಿಡುಗಡೆ ಮಾಡಿತ್ತು. ಸಾಹು ಅವರ ಬಿಡುಗಡೆಗಾಗಿ ಭಾರತ ಮತ್ತು ಪಾಕಿಸ್ತಾನದ ಗಡಿ ರಕ್ಷಣಾ ಪಡೆಗಳು ಗುರುವಾರ ರಾತ್ರಿ ಧ್ವಜ ಸಭೆ ನಡೆಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈವರೆಗೂ ಈ ಕುರಿತು ಯಾವುದೇ ಸಕಾರಾತ್ಮಕ ಬೆಳವಣಿಗೆ ನಡೆದಿಲ್ಲ.
ಇನ್ನು ಈ ಕುರಿತು ಆತಂಕಕ್ಕೆ ಒಳಗಾಗಿರುವ ಸಾಹು ಅವರ ಗರ್ಭಿಣಿ ಪತ್ನಿ ಹೇಳಿಕೆ ನೀಡಿದ್ದು “ಈ ಸುದ್ದಿ ತಿಳಿದಾಗಿನಿಂದ ನಾನು ತೀವ್ರ ಒತ್ತಡದಲ್ಲಿದ್ದೇನೆ. ಐದನೇ ದಿನವಾದರೂ ಅವರ ಬಿಡುಗಡೆ ಕುರಿತು ಯಾವುದೇ ಮಾಹಿತಿಯಿಲ್ಲ,” ಎಂದು ಸಾಹು ಅವರ ಪತ್ನಿ ರಜನಿ ತಿಳಿಸಿದ್ದಾರೆ. “ನಾಳೆಯ ಚಂಡೀಗಢಕ್ಕೆ ವಿಮಾನದ ಟಿಕೆಟ್ ಪಡೆದಿದ್ದೇನೆ. ಅಲ್ಲಿಂದ ಫಿರೋಜ್‌ಪುರಕ್ಕೆ ಹೋಗುತ್ತೇನೆ. ನನ್ನ ಮಗ ಮತ್ತು ಇತರ ಮೂವರು ಸಂಬಂಧಿಕರು ನನ್ನೊಂದಿಗೆ ಇರಲಿದ್ದಾರೆ,” ಎಂದು ಅವರು ಹೇಳಿದರು.
ಇದನ್ನೂ ಓದಿ :ಪಾಕಿಸ್ತಾನ್ನಲ್ಲಿ ಬಾಂಬ್ ಸ್ಪೋಟ: 7 ಮಂದಿ ಸಾವು, ಹಲವರಿಗೆ ಗಂಭೀರ ಗಾಯ
ರಜನಿ ಅವರು ಆರಂಭದಲ್ಲಿ ಭಾನುವಾರ ಸಂಜೆ ಹೌರಾದಿಂದ ಪಠಾಣ್‌ಕೋಟ್ ಮೂಲಕ ಫಿರೋಜ್‌ಪುರಕ್ಕೆ ಹೋಗುವ ಅಮೃತಸರ್ ಮೇಲ್ ರೈಲಿನಲ್ಲಿ ಪ್ರಯಾಣಿಸಲು ಯೋಜಿಸಿದ್ದರು. ಆದರೆ ಟಿಕೆಟ್ ಲಭಿಸದ ಕಾರಣ ಈ ಯೋಜನೆ ರದ್ದಾಯಿತು. ತಮ್ಮ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೆ, ಫಿರೋಜ್‌ಪುರದಿಂದ ದೆಹಲಿಗೆ ತೆರಳಿ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ರಜನಿ ತಿಳಿಸಿದ್ದಾರೆ.