ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ದ ಅನೇಕ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿದ್ದು. ಅದರಲ್ಲಿ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿದೆ. ಇದರ ಬೆನ್ನಲ್ಲೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರವಾಹದ ಎಚ್ಚರಿಕೆ ನೀಡಿದ್ದು. ಅಲ್ಲಿರುವ ಸ್ಥಳೀಯ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಿದೆ. ಭಾರತ ಝೇಲಂ ನದಿಯಿಂದ ಹೆಚ್ಚುವರಿ ನದಿ ನೀರು ಬಿಡುಗಡೆ ಮಾಡಿರುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಪಾಕ್ ದೂರಿದೆ.
ಇದನ್ನೂ ಓದಿ :ಅನ್ಯ ಜಾತಿಯ ಯುವಕನೊಂದಿಗೆ ಪ್ರೀತಿ: ಮಗಳ ಕಥೆ ಮುಗಿಸಿ ಕೃಷ್ಣ ನದಿಗೆ ಎಸೆದ ಅಪ್ಪ
ಸ್ಥಳೀಯ ನಿವಾಸಿಗಳ ಪ್ರಕಾರ, ಝೇಲಂ ನದಿಯ ನೀರಿನ ಮಟ್ಟ ವೇಗವಾಗಿ ಏರಿದ್ದು, ಗರಿ ದುಪಟ್ಟಾ, ಮಝೋಯ್ ಮತ್ತು ಮುಜಫರಾಬಾದ್‌ನಂತಹ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಈ ಕುರಿತು ಮಸೀದಿಗಳಿಂದ ನಿರಂತರವಾಗಿ ಎಚ್ಚರಿಕೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ಭಾರತವು ಯಾವುದೇ ಪೂರ್ವ ಸೂಚನೆ ಇಲ್ಲದೆ ಅನಂತನಾಗ್‌ನಿಂದ ಝೇಲಂ ನದಿಗೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಗಿದ್ದು, ಇದು ಭಾರತ ಉದ್ದೇಶಪೂರ್ವಕವಾಗಿ ತೆಗೆದುಕೊಂಡ ಕ್ರಮ ಎಂದು ಪಾಕಿಸ್ತಾನ ದೂರಿದೆ.
ಭಾರತವು ಸಾಮಾನ್ಯಕ್ಕಿಂತ ಹೆಚ್ಚಿನ ನೀರನ್ನು ಬಿಡುಗಡೆ ಮಾಡಿರುವುದರಿಂದ, ಝೇಲಂ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಎಂದು ಮುಜಫರಾಬಾದ್ ಜಿಲ್ಲಾಡಳಿತ ಹೇಳಿದೆ. ಜನರು ಝೇಲಂ ನದಿಯ ಬಳಿಗೆ ಹೋಗಬಾರದು ಮತ್ತು ತಮ್ಮ ಪ್ರಾಣಿಗಳನ್ನು ಅದರ ಬಳಿಗೆ ಹೋಗಲು ಬಿಡಬಾರದು ಎಂದು ಸೂಚಿಸಲಾಗಿದೆ, ಇದರಿಂದ ಯಾವುದೇ ಜೀವ ಮತ್ತು ಆಸ್ತಿ ನಷ್ಟವನ್ನು ತಪ್ಪಿಸಬಹುದು.
ಇದನ್ನೂ ಓದಿ :ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ; ‘ಪಾಕಿಸ್ತಾನದ ರತ್ನ’ ಎಂದ ಆರ್.ಅಶೋಕ್
ಸಿಂಧೂ ನದಿ ನೀರು ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸುವುದಾಗಿ ಭಾರತ ಇತ್ತೀಚೆಗೆ ಬೆದರಿಕೆ ಹಾಕಿದ್ದ ನಂತರ ಈ ಅನಿರೀಕ್ಷಿತ ನಡೆ ಅಚ್ಚರಿಯೇನಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಇದು ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಆದರೆ ಈ ಘಟನೆಗೆ ಬಗ್ಗೆ ಭಾರತ ಸರ್ಕಾರ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.