ರಾಯಚೂರು : ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಮಗಳು ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು ಎಂದು ಕೋಪಗೊಂಡ ತಂದೆಯೊಬ್ಬ ಮಗಳನ್ನು ಕೊಲೆ ಮಾಡಿ ಕೃಷ್ಣ ನದಿಗೆ ಎಸೆದಿದ್ದಾನೆ. ಒಂದು ವರ್ಷದ ಹಿಂದೆ ನಡೆದಿರುವ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.
ರಾಯಚೂರಿನ ಲಿಂಗಸಗೂರು ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು. ಕೊಲೆಯಾದ ದುರ್ದೈವಿಯನ್ನು 17 ವರ್ಷದ ರೇಣುಕಾ ಎಂದು ಗುರುತಿಸಲಾಗಿದೆ. ರೇಣುಕಾ ಅದೇ ಗ್ರಾಮದಲ್ಲಿ ವಾಸವಾಗಿದ್ದ ಹನುಮಂತ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಹನುಮಂತ ಅನ್ಯ ಜಾತಿಯವನೆಂದು ತಿಳಿದು ರೇಣುಕಾಳ ಮನೆಯಲ್ಲಿ ಇಬ್ಬರ ಪ್ರೀತಿಗೆ ಒಪ್ಪಿರಲಿಲ್ಲ. ಇದರಿಂದ ಬೇಸತ್ತ ರೇಣುಕ ಆತನೊಂದಿಗೆ ಮನೆಬಿಟ್ಟು ಓಡಿಹೋಗಿದ್ದಳು. ಇದನ್ನೂ ಓದಿ :ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ; ‘ಪಾಕಿಸ್ತಾನದ ರತ್ನ’ ಎಂದ ಆರ್.ಅಶೋಕ್
ಮಗಳನ್ನು ಯುವಕ ಅಪಹರಿಸಿದ್ದಾನೆ ಎಂದು ರೇಣುಕಾಳ ತಂದೆ ಲಕ್ಕಪ್ಪ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೋಕ್ಸೋ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಇಬ್ಬರನ್ನು ಹುಡುಕಿ ಕರೆತಂದು ಮನೆಯವರಿಗೆ ಒಪ್ಪಿಸಿದ್ದರು. ಆದರೆ ರೇಣುಕಾ ಹನುಮಂತನೊಂದಿಗೆ ಅದೇ ಸಲುಗೆಯಿಂದ ನಡೆದುಕೊಳ್ಳುತ್ತಿದ್ದಳು. 18 ವರ್ಷ ತುಂಬಿದ ಮರುದಿನವೇ ಹನುಮಂತನೊಂದಿಗೆ ಹೋಗುವುದಾಗಿ ಮನೆಯವರಿಗೆ ಹೇಳಿದ್ದಳು.
ಆದರೆ ಮಗಳ ವರ್ತನೆಯಿಂದ ಬೇಸತ್ತಿದ್ದ ಲಕ್ಕಪ್ಪ ಮರ್ಯಾದೆ ಕಳೆಯಬೇಡ, ಆತನೊಂದಿಗೆ ಮಾತನಾಡುವುದನ್ನು ಬಿಡು ಎಂದು ತಾಕೀತು ಮಾಡಿದ್ದನು. ಆದರೆ ಇದಕ್ಕೆ ಕ್ಯಾರೆ ಎನ್ನದ ರೇಣುಕಾ ಆತನೊಂದಿಗೆ ತನ್ನ ಸಲುಗೆಯನ್ನು ಮುಂದುವರಿಸಿದ್ದಳು. ಇದರಿಂದ ಕೋಪಗೊಂಡಿದ್ದ ಲಕ್ಕಪ್ಪ ಮಗಳ ಹತ್ಯೆ ಮಾಡಿ ಆಕೆಯ ಶವವನ್ನು ಕೃಷ್ಣ ನದಿಗೆ ಎಸೆದಿದ್ದನು. ಮನೆಗೆ ಬಂದು ಹೆಂಡತಿ ಬಳಿ ಕೊಲೆ ಮಾಡಿರುವ ವಿಷಯವನ್ನು ಹೇಳಿದ್ದ ಲಕ್ಕಪ್ಪ. ಈ ವಿಷಯವನ್ನು ಬಾಯಿಬಿಟ್ಟರೆ ನಿನ್ನನ್ನು ಕೊಲೆ ಮಾಡಿವುದಾಗಿ ಹೆಂಡತಿಗೆ ಬೆದರಿಕೆ ಹಾಕಿದ್ದನು.
ಇದನ್ನೂ ಓದಿ :ಇರಾನ್ ಬಂದರಿನಲ್ಲಿ ಪ್ರಬಲ ಸ್ಫೋಟ: 500ಕ್ಕೂ ಹೆಚ್ಚು ಜನರಿಗೆ ಗಾಯ
ಇದಾದ ಬಳಿಕ ಗ್ರಾಮದಲ್ಲಿರುವ ಜನರಿಗೆ ಮಗಳನ್ನು ಯಾರಿಗೂ ತಿಳಿಯದ ರೀತಿಯಲ್ಲಿ ಬೇರೆಯವರ ಜೊತೆ ಮದುವೆ ಮಾಡಿ ಕಳುಹಿಸಿರುವುದಾಗಿ ಲಕ್ಕಪ್ಪ ಹೇಳಿಕೊಂಡು ತಿರುಗಿದ್ದನು. ಆದರೆ ಇದೀಗ ಒಂದು ವರ್ಷದ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು. ಮಗಳನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಶವಕ್ಕಾಗಿ ಪೊಲೀಸರು ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದು. ಲಿಂಗಸಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.