Wednesday, April 23, 2025

ಮೆಹಂದಿ ಮಾಸುವ ಮುನ್ನವೇ ಕುಂಕುಮ ಅಳಿಸಿದ ಉಗ್ರರು: ಉಗ್ರ ದಾಳಿಯಲ್ಲಿ ನೌಕಪಡೆ ಅಧಿಕಾರಿ ಸಾವು

ಶ್ರೀನಗರ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ್ದು. ಘಟನೆಯಲ್ಲಿ ಹೊಸದಾಗಿ ವಿವಾಹವಾದ ಭಾರತೀಯ ನೌಕಾಪಡೆಯ ಅಧಿಕಾರಿ, ಹರಿಯಾಣ ಮೂಲದ 26 ವರ್ಷದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಕೂಡ ಬಲಿಯಾಗಿದ್ದಾರೆ.

ವಿನಯ್​ ನರ್ವಾಲ್​ ಕಳೆದ ಏ.16ರಂದು ಹಿಮಾಂಶಿ ಎಂಬುವವರ ಜೊತೆ ಮದುವೆಯಾಗಿ ಹನಿಮೂನ್​ಗೆ ಎಂದು ಕಾಶ್ಮೀರ್​ಗೆ ಬಂದಿದ್ದರು. ಆದರೆ ಉಗ್ರದಾಳಿಯಲ್ಲಿ ವಿನಯ್​ ಸಾವನ್ನಪ್ಪಿದ್ದಾರೆ. ಮೇ 1 ರಂದು ತಮ್ಮ 27 ನೇ ಹುಟ್ಟುಹಬ್ಬವನ್ನು ಆಚರಿಸಲು ವಿನಯ್​ ಎದುರು ನೋಡುತ್ತಿದ್ದರು, ಇದಕ್ಕಾಗಿ ಅವರ ಕುಟುಂಬವು ಅದ್ಧೂರಿ ಕಾರ್ಯಕ್ರಮವನ್ನು ಯೋಜಿಸಿತ್ತು.

ಇದನ್ನೂ ಓದಿ:ಕೇಂದ್ರ ಸರ್ಕಾರದ ವೈಪಲ್ಯ: ಮೋದಿ ಇಂದಿರಾ ಗಾಂಧಿಯಂತೆ ಕ್ರಮ ಕೈಗೊಳ್ಳಬೇಕು: ರಾಮಲಿಂಗರೆಡ್ಡಿ

ಕೊಚ್ಚಿಯಲ್ಲಿ ನೌಕಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿನಯ್​ ನರ್ವಾಲ್ ತಮ್ಮ ಮದುವೆ ಮತ್ತು ಹುಟ್ಟುಹಬ್ಬದ ಆಚರಣೆಗಾಗಿ 40 ದಿನಗಳ ರಜೆ ತೆಗೆದುಕೊಂಡಿದ್ದರು. ಏಪ್ರಿಲ್ 4 ರಂದು ಹಿಮಾಂಶಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವಿನಯ್​, ಏಪ್ರಿಲ್ 16 ರಂದು ಮಸ್ಸೂರಿಯಲ್ಲಿ ಮದುವೆ ಮಾಡಿಕೊಂಡಿದ್ದರು.  ಮದುವೆಯ ನಂತರ, ಕುಟುಂಬವು ಏಪ್ರಿಲ್ 19 ರಂದು ಕರ್ನಾಲ್‌ನಲ್ಲಿ ಆರತಕ್ಷತೆಯನ್ನು ಮುಗಿಸಿ ಏಪ್ರೀಲ್​ 21ರಂದು ಕಾಶ್ಮೀರಕ್ಕೆ ವಿಮಾನ ಹತ್ತಿದ್ದರು.

ಮೊದಲು ಸ್ವಿಜರ್​ಲ್ಯಾಂಡ್​ ಹೋಗಲು ಯೋಜನೆ ರೂಪಿಸಿದ್ದ ವಿನಯ್​ ಅಲ್ಲಿಗೆ ಹೋಗಲು ಸೇನೆ ಅನುಮತಿ ನೀಡದ ಹಿನ್ನಲೆ ಕಾಶ್ಮೀರಕ್ಕೆ ಬಂದಿದ್ದರು. ಆದರೆ ಇದೀಗ ಪಹಲ್ಗಾಮ್​ನಲ್ಲಿ ನಡೆದ ಉಗ್ರ ದಾಳಿಯಲ್ಲಿ ವಿನಯ್​ ಸಾವನ್ನಪ್ಪಿದ್ದಾರೆ. ಮದುವೆಯಾಗಿ ಕೈಯಲ್ಲಿನ ಮೆಹಂದಿ ಅಳಿಸುವ ಮುನ್ನವೇ ಹಿಮಾಂಶಿ ಹಣೆಯಲ್ಲಿನ ಕುಂಕುಮವನ್ನ ಉಗ್ರರು ಅಳಿಸಿದ್ದಾರೆ. ವಿನಯ್​ ಮೇ.01ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು ಮೇ.03ರಂದು ಪತ್ನಿಯೊಂದಿಗೆ ಕೊಚ್ಚಿಗೆ ತೆರಳಲು ನಿರ್ಧರಿಸಿದ್ದರು.

ಇದನ್ನೂ ಓದಿ :ಭೀಕರ ಉಗ್ರದಾಳಿ: IPL ಪಂದ್ಯದ ವೇಳೆ ಕಪ್ಪುಪಟ್ಟಿ ಧರಿಸಿ ಆಟವಾಡಲು ನಿರ್ಧಾರ

ವಿನಯ್​ ನರ್ವಾಲ್​ ಅವರ ಪಾರ್ಥೀವ ಶರೀರ ಬುಧವಾರ ಸಂಜೆ ಕರ್ನಾಲ್‌ನಲ್ಲಿರುವ ಅವರ ಹುಟ್ಟೂರಿಗೆ ತಲುಪಲಿದ್ದು, ಅಲ್ಲಿ ಕುಟುಂಬವು ಅವರ ಅಂತಿಮ ವಿಧಿಗಳನ್ನು ನೆರವೇರಿಸಲಿದೆ.

ವೈರಲ್ ಆಗಿರುವ ವೀಡಿಯೊವೊಂದರಲ್ಲಿ ವಿನಯ್​ ಪತ್ನಿ ಹಿಮಾಂಶಿ, “ನಾನು ನನ್ನ ಪತಿಯೊಂದಿಗೆ ಭೇಲ್ ಪುರಿ ತಿನ್ನುತ್ತಿದ್ದೆ. ಒಬ್ಬ ವ್ಯಕ್ತಿ ಬಂದು ನೀವು ಮುಸ್ಲಿಂ ಎಂದು ಕೇಳಿದ. ಅವರು ನಿರಾಕರಿಸಿದಾಗ, ಆ ವ್ಯಕ್ತಿ ಅವರನ್ನು ಗುಂಡು ಹಾರಿಸಿ ಕೊಂದರು” ಎಂದು ಹೇಳುತ್ತಿರುವುದು ಕೇಳಿಬಂದಿದೆ.

ಘಟನೆ ಸಂಬಂಧ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ, ಈ ಘಟನೆಯನ್ನು “ದುರದೃಷ್ಟಕರ” ಎಂದು ಬಣ್ಣಿಸಿದ್ದಾರೆ. “ಸರ್ಕಾರವು ತಮ್ಮ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ” ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES