ದಾವಣಗೆರೆ: ರಾಜ್ಯ ಸರ್ಕಾರದ ಬೆಲೆ ಏರಿಕೆ ಬರೆ, ಹಗರಣಗಳ ಸರಮಾಲೆ ವಿರುದ್ದ ಸಮರ ಸಾರಿರುವ ರಾಜ್ಯ ಬಿಜೆಪಿ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಮಾಡ್ತಾ ಇದೆ, ಆದರೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಜನಾಕ್ರೋಶ ಯಾತ್ರೆಯಲ್ಲಿ ಪ್ರಮುಖ ನಾಯಕರೇ ಗೈರಾಗಿದ್ದು ಬಿಜೆಪಿಯಲ್ಲಿ ಒಳಜಗಳಕ್ಕೆ ಸಾಕ್ಷಿಯಾಗಿದೆ.
ಇಂದು ಬೆಣ್ಣೆನಗರಿ ದಾವಣಗೆರೆಯಲ್ಲಿ ಕೇಸರಿ ಕಲಿಗಳು ಸಮರ ಸಾರಿದ್ದು, ಬೆಲೆ ಏರಿಕೆ, ರಾಜ್ಯ ಸರ್ಕಾರದ ಹಗರಣಗಳ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ, ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಜಿಲ್ಲಾ ನಾಯಕರು ಜನಾಕ್ರೋಶ ಯಾತ್ರೆ ನಡೆಸಿದ್ದು ಈ ಯಾತ್ರೆಯಲ್ಲಿ ಮಾಜಿ ಸಿಎಂ ಸದಾನಂದ ಗೌಡ, ವಿಧಾನಪರಿಷತ್ ವಿಪಕ್ಷ ನಾಯಕ ಛಲುವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಪಿ ರಾಜೀವ್, ಎಂಪಿ ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಭಾಗಿಯಾಗಿ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ:ಈಗಾಗಲೇ ಕಾರ್ಯಾಂಗವನ್ನು ಅತಿಕ್ರಮಿಸಿರುವ ಆರೋಪ ನಮ್ಮ ಮೇಲಿದೆ: ಸುಪ್ರೀಂ ಕೋರ್ಟ್
ಆದರೆ ಈ ಯಾತ್ರೆಯಲ್ಲಿ ದಾವಣಗೆರೆ ಜಿಲ್ಲೆಯ ಪ್ರಮುಖ ನಾಯಕರುಗಳಾದ ಮಾಜಿ ಸಚಿವ ಜಿಎಂ ಸಿದ್ದೇಶ್ವರ್ ಆ್ಯಂಡ್ ಟೀಮ್ ಈ ಯಾತ್ರೆಯ ಹತ್ತಿರಕ್ಕೂ ಸುಳಿಯದೆ ಬಿಜೆಪಿ ಪ್ರತಿಭಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅಷ್ಟೆ ಅಲ್ಲದೇ ಹರಿಹರ ಶಾಸಕ ಬಿಪಿ ಹರೀಶ್, ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರಪ್ಪ, ಪ್ರೋ. ಲಿಂಗಣ್ಣ, ಮಾಜಿ ಜಿಲ್ಲಾಧ್ಯಕ್ಷರು ಪದಾಧಿಕಾರಿಗಳು ಗೈರಾಗಿದ್ದು, ಬಿಜೆಪಿಯಲ್ಲಿನ ಒಳಜಗಳ ತಣ್ಣಗಾಗಿಲ್ಲ ಎಂಬುದನ್ನು ಸೂಚಿಸಿದೆ. ಜೊತೆಗೆ ರೇಣುಕಾಚಾರ್ಯ ಟೀಂ ಕೂಡ ಯಾವುದೇ ಫ್ಲೆಕ್ಸ್ ಹಾಗೂ ಬ್ಯಾನರ್ಗಳಲ್ಲಿ ಸಿದ್ದೇಶ್ವರ್ ಸೇರಿದಂತೆ ಭಿನ್ನ ನಾಯಕರ ಪೋಟೋಗಳನ್ನು ಹಾಕದೆ ಇರುವ ಕಾರಣ ಉರಿಯುವ ಬೆಂಕಿಗೆ ತುಪ್ಪ ಹಾಕಿದಂತಾಗಿದೆ.
ಇದನ್ನೂ ಓದಿ :ಕೃಷ್ಣ ದೇವರಾಯರ ಸಮಾಧಿ ಮೇಲೆ ಮಾಂಸ ಸ್ವಚ್ಚತೆ: ಯತ್ನಾಳ್ ಆಕ್ರೋಶ
ಒಗ್ಗಟ್ಟಿನ ಮಂತ್ರ ಜಪಿಸಿದ ವಿಜಯೇಂದ್ರ..!
ಜನಾಕ್ರೋಶ ಯಾತ್ರೆಯ ವೇಳೆ ವಿಜಯೇಂದ್ರ ಒಗ್ಗಟ್ಟಿನ ಮಂತ್ರ ಜಪಿಸಿದ್ದು. ‘ಜನಾಕ್ರೋಶ ಯಾತ್ರೆ ಮುಗಿದ ಬಳಿಕ ಮುಂದಿನ ದಿನಗಳಲ್ಲಿ ಎಲ್ಲರು ಒಗ್ಗಟ್ಟಾಗುತ್ತೇವೆ, ನಮ್ಮಲ್ಲಿರುವ ಭಿನ್ನಾಭಿಪ್ರಾಯ ಮರೆಯಬೇಕಿದೆ, ಮುಂದೆ ಎಲ್ಲಾ ಜಿಲ್ಲೆಗಳಲ್ಲಿ ಒಂದೊಂದು ದಿನ ಉಳಿದುಕೊಂಡು ನಾಯಕರ ಸಮಸ್ಯೆಗಳನ್ನ ಸರಿಪಡಿಸಿ ಒಂದುಗೂಡಿಸುವ ಪ್ರಯತ್ನ ಮಾಡುತ್ತೇನೆ, ಈ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಸಂಕಲ್ಪಮಾಡುತ್ತೇವೆ ಎಂದು ಹೇಳಿದ್ರು.