ಕಲಬುರಗಿ : ಕ್ಯಾಬಿನೆಟ್ಗೆ ಸಲ್ಲಿಕೆ ಆಗಿದ್ದು ಜಾತಿ ಗಣತಿ ಅಲ್ಲವೇ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಜಾತಿ ಜನಗಣತಿ ವರದಿ ವಿಚಾರಕ್ಕೆ ಅಪರಸ್ವರ ಕೇಳಿ ಬಂದ ಬೆನ್ನಲ್ಲೆ ನಗರದಲ್ಲಿಂದು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ ಸಚಿವ ಖರ್ಗೆ ಅವರು, ಕ್ಯಾಬಿನೆಟ್ಗೆ ಸಲ್ಲಿಕೆ ಆಗಿದ್ದು ಜಾತಿ ಗಣತಿ ಅಲ್ಲವೇ ಅಲ್ಲ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅಷ್ಟೇ ಎಂದು ಅವರು ಹೇಳಿದ್ದಾರೆ.
ಅದು ಜಾತಿ ಗಣತಿ ಅಂತ ಯಾರು ಹೇಳಿದ್ರು? ಗೊತ್ತಿಲ್ಲ. ಜಾತಿ ಗಣತಿ ಅಂದ್ರೆ ಕೋರ್ಟ್‌ನಲ್ಲಿ ನಿಲ್ಲುತ್ತಾ? ಜಾತಿ ಗಣತಿ ಕೇಂದ್ರ ಸರಕಾರ ಮಾಡುತ್ತೆ. ಇಲ್ಲವೇ ಸರ್ವೆ ಇಲಾಖೆ ಮಾಡುತ್ತೆ. ಹಿಂದುಳಿದ ವರ್ಗಗಳ ಆಯೋಗ ಮಾಡಿದ್ದು ಕೇವಲ ಸಮೀಕ್ಷೆ. ಆಯೋಗ ಎಲ್ಲಾ ರಾಜ್ಯಗಳಲ್ಲೂ ಇಲ್ಲ. ಒಂದೆರಡು ರಾಜ್ಯಗಳಲ್ಲಿ ಮಾತ್ರ ಇದೆ. ಅವರ ಈ ಸಮೀಕ್ಷೆಯಿಂದ ನೀತಿ, ಯೋಜನೆಗಳನ್ನು ರೂಪಿಸಬಹುದು ಎಂದರು.
ಸಮೀಕ್ಷೆ ವೈಜ್ಞಾನಿಕವಾಗಿ ಆಗಿದೆಯೋ ಅವೈಜ್ಞಾನಿಕವಾಗಿ ಆಗಿದೆಯೋ ಚರ್ಚೆಗೆ ಬರಲಿ. ಇದೇ 17ರಂದು ಹಿಂದುಳಿದ ವರ್ಗಗಳ ಇಲಾಖೆಯವರು ಬಂದು ಪ್ರಸ್ತುತಿ ಮಾಡೋದಾಗಿ ಹೇಳಿದ್ದಾರೆ. ಅದಾದ ನಂತರ ನೋಡೋಣ. ಈ ಸಮೀಕ್ಷೆ ಮಾಡಿದ ತಕ್ಷಣ ಕಲ್ಲಲ್ಲಿ ಕೆತ್ತಿದ್ದಾರಂತಲ್ಲ, ಇದನ್ನು ಅನುಷ್ಠಾನಕ್ಕೆ ತರ್ತಿವಿ ಅಂತ ಹೇಳಿಲ್ಲವಲ್ಲ. ಅವರು ಸಮೀಕ್ಷೆಗೆ ದತ್ತಾಂಶ ಹೇಗೆ ತಗೊಂಡಿದಾರೆ? ಯಾಕೆ ತಗೊಂಡಿದಾರೆ? ಅದರಲ್ಲಿ ಅಡಗಿರುವ ಅಂಕಿ ಅಂಶ ಏನಿದೆ ? ಪರಿಣಾಮ ಏನಾಗುತ್ತೆ ? ಎಲ್ಲವೂ ಚರ್ಚೆ ಆಗಲಿ. ವೈಜ್ಞಾನಿಕವೋ ಅವೈಜ್ಞಾನಿಕವೋ ಕ್ಯಾಬಿನೆಟ್ಗೆ ಬರಲಿ ಚರ್ಚೆ ಮಾಡೋಣ. ಕೂಸು ಹುಟ್ಟುವ ಮುನ್ನವೇ ಗಂಡೋ ಹೆಣ್ಣೋ ಅಂದ್ರೆ ಹೇಗೆ? ಎಂದು ಕಲಬುರಗಿಯಲ್ಲಿ ಸಚಿವ ಪ್ರೀಯಾಂಕ್ ಖರ್ಗೆ ಅವರು ವಿರೋಧ ಮಾಡೋರಿಗೆ ಪ್ರಶ್ನೆ ಮಾಡಿದ್ದಾರೆ.