ಬೆಂಗಳೂರು : ಇವತ್ತು ಎಲ್ಲಾ ಕೈಗಾರಿಕೆಗಳು, ಐಟಿ-ಬಿಟಿ, ಟ್ರೇಡ್ ಯುನಿಯನ್ಗಳನ್ನ ಸೇರಿಸಿದ್ವಿ, ಕನಿಷ್ಠ ವೇತನ ಜಾರಿ ಕುರಿತಂತೆ ಇನ್ನೂ 6 ದಿನ ಕಾಲವಕಾಶವಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.
ಮಂಗಳವಾರ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ಕ್ಷೇತ್ರಗಳಲ್ಲಿ ಇನ್ನೂ ಏನಾದರೂ ಬದಲಾವಣೆ ತರಬಹುದಾ ಅಂತ ಚರ್ಚೆ ಮಾಡಿದ್ವಿ. 250ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಆರೋಗ್ಯಕರ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಜಾತಿಗಣತಿ ವರದಿಗೆ ಮೇಲ್ವರ್ಗಗಳ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಅವರು, ಯಾವುದೇ ದೇಶದಲ್ಲಿ ಪೊಲಿಟಿಕಲ್ ಜಸ್ಟಿಫೈ ಮಾಡಲು ಜಾತಿ ಗಣತಿ ಆಗಬೇಕು. ನನಗಿರುವ ಮಾಹಿತಿ ಪ್ರಕಾರ ಅಸೆಂಬ್ಲಿವಾರು ಜಾತಿ ಗಣತಿ ಕುರಿತು ಸಿಡಿ ಕೊಡುವ ಸಾಧ್ಯತೆ ಇದೆ ಎಂದರು.
ಇನ್ನು ನಿಮ್ಮ ನಿಮ್ಮ ಸಮುದಾಯ ಎಷ್ಟಿದೆ ಅಂತ ಚೆಕ್ ಮಾಡಿ ಜಸ್ಟಿಫೈ ಮಾಡಲು ಅವಕಾಶವಿದೆ. ರಾಜಕೀಯವಾಗಿ ಜಾತಿ ಗಣತಿಯೇ ಅತೀ ಮುಖ್ಯ. ಅಸೆಂಬ್ಲಿ ಚುನಾವಣೆ ನಡೆದ ಆರು ತಿಂಗಳಲ್ಲಿ ಲೋಕಸಭೆ ಚುನಾವಣೆಗೆ ನಲವತ್ತು ಲಕ್ಚ ಮತಗಳು ಹೆಚ್ಚಾಗುತ್ತದೆ ಹೀಗಾಗಿ ಜಾತಿ ಗಣತಿ ಬೇಕಾಗಿದೆ ಎಂದು ಹೇಳಿದರು.
ಸದ್ಯ ಜಾತಿ ಗಣತಿ ಸಮೀಕ್ಷೆ ಮಾಡಿರೋದು ಶಿಕ್ಷಕರು. ಅವರು ಇಂತಹದ್ದೆ ಮನೆಗೆ ಹೋಗಿ ಅಂತ ಹೇಳಕಾಗುತ್ತಾ? ವರದಿಯನ್ನೇ ನೋಡದೇ ಸಾರಾಸಗಟಾಗಿ ಸರಿ ಇಲ್ಲ ಎನ್ನುವುದು ಎಷ್ಟು ಸರಿ? ನಿಮ್ಮ ಮನೆಗೆ ಬಂದಿಲ್ಲ ಅಂದ್ರೆ ಶೇ.95ರಷ್ಟು ಮನೆಗೆ ಹೋಗಿದ್ದಾರಲ್ಲ! ಸಿಡಿ ಬಂದ ಮೇಲೆ ನಮ್ಮ ನಮ್ಮ ಸಮಾಜ ಎಷ್ಟಿದೆ ಅಂತ ನೋಡಿಕೊಳ್ಳಿ ಎಂದು ಮಾತಾಡಿದರು.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದ ಎಂಎಲ್ಎಗಳ ಸಭೆ ಕರೆದಿರುವ ಬಗ್ಗೆ ಮಾತಾಡಿದ ಸಚಿವ ಸಂತೋಷ್ ಲಾಡ್ ಅವರು, ಡಿಕೆಶಿಯವ್ರು ಸಭೆ ಕರೆದಿದ್ದಾರೆ ಅಂದ್ರೆ ಸಹಜವಾಗಿ ಆ ಸಮುದಾಯಗಳಿಗೆ ಆತಂಕ ಇರುತ್ತದೆ ಅದಕ್ಕೆ ಸಭೆ ಕರೆದಿರ್ತಾರೆ. ಈ ಸ್ವಾಮೀಜಿಗಳು, ಜಾತಿ ಸಂಘಟನೆಗಳ ಲೆಕ್ಕಾಚಾರ ಕೇಳಿದ್ರೆ ರಾಜ್ಯದ ಜನಸಂಖ್ಯೆ 12 ಕೋಟಿ ಆಗುತ್ತದೆ. ಸರ್ಕಾರದಿಂದ ಅಧಿಕೃತವಾಗಿ ವರದಿ ಬಂದಿದೆ. ವರದಿ ನೋಡೋಣ, ಸಾರ್ವಜನಿಕ ಚರ್ಚೆಗೆ ಬರಲಿ. ವರದಿಯಲ್ಲಿ ಬದಲಾವಣೆ ತರಲು ಅವಕಾಶ ಇದ್ರೆ ತರೋಣ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ತಿಳಿಸಿದರು.